
ಹಿರಿಯೂರು :
ಕೇವಲ ಪಠ್ಯ ವಿಷಯಕ್ಕೆ ಮಾತ್ರ ಒತ್ತು ಕೊಡದೇ ಸಹಪಠ್ಯ ಚಟುವಟಿಕೆಗಳಿಗೂ ಸಹ ಒತ್ತು ನೀಡುವ ಜೊತೆಗೆ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅವರ ಆಸಕ್ತಿಯ ಕ್ಷೇತ್ರದಲ್ಲಿ ಅವರು ಸಾಧನೆ ಮಾಡಲು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಅತ್ಯಗತ್ಯವಾಗಿದ್ದು, ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಳ್ಳಬೇಕು ಎಂಬುದಾಗಿ ಕ್ಷೇತ್ರಶಿಕ್ಷಣಾಧಿಕಾರಿಗಳಾದ ತಿಪ್ಪೇಸ್ವಾಮಿ ಹೇಳಿದರು.

ನಗರದ ಪಿ.ಎಂ.ಶ್ರೀ.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಿರಿಯೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಿರಿಯೂರು, ಸಮೂಹ ಸಂಪನ್ಮೂಲ ಕೇಂದ್ರ ನಗರ ಉತ್ತರ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇಂದಿನ ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರತಿಭಾವಂತನಾಗಿದ್ದು, ಪೋಷಕರು ನಿಮ್ಮ ಮಕ್ಕಳ ಆಸಕ್ತಿಯ ಕ್ಷೇತ್ರವನ್ನು ಗುರುತಿಸಿ, ಅವರ ಆಸೆಗಳಿಗೆ ತಕ್ಕಂತೆ ಕಲಿಕೆಗೆ ಸೂಕ್ತ ತರಬೇತಿ ನೀಡಿದಾಗ ಮಾತ್ರ ಅವರು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ ಎಂದರಲ್ಲದೆ,

ಈ ಕಾರ್ಯಕ್ರಮದ ತೀರ್ಪುಗಾರರು ಯಾವುದೇ ಶಾಲೆಯ ಮಗುವಾಗಲಿ, ಯಾವುದೇ ತಾರತಮ್ಯವಿಲ್ಲದೆ, ನಿಸ್ಪಕ್ಷಪಾತವಾಗಿ ನಿಜವಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಅವರನ್ನು ಆಯ್ಕೆ ಮಾಡುವ ಮೂಲಕ ಈ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು ಎಂಬುದಾಗಿ ತೀರ್ಪುಗಾರರಿಗೆ ಸೂಚನೆ ನೀಡಿದರು.

ಕರ್ನಾಟಕ ಮಾಧ್ಯಮಅಕಾಡೆಮಿ ಪ್ರಶಸ್ತಿಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಪಠ್ಯ ವಿಷಯಗಳಲ್ಲಿ ಮಾತ್ರ ಸೀಮಿತವಾಗದೇ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಈ ದೇಶದ ಪ್ರತಿಭಾವಂತ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕು ಎಂಬುದಾಗಿ ಕರೆ ನೀಡಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿ ಶಿವಮೂರ್ತಿ ಮಾತನಾಡಿ, ಈ ಸಕ್ಕರೆ ಕಾರ್ಖಾನೆ ಶಾಲೆ ಭವ್ಯ ಇತಿಹಾಸ ಪರಂಪರೆ ಹೊಂದಿದ್ದು, ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ ಅತ್ಯುನ್ನತ ಪದವಿ ಗಳಿಸಿರುವುದಲ್ಲದೆ, ಇಲ್ಲಿಯ ಪ್ರತಿಭೆಗಳು ಜಿ ಕನ್ನಡ ವಾಹಿನಿಯ ಅಂತ್ಯಾಕ್ಷರಿ ಹಾಗೂ ಸರಿಗಮಪ ದಂತಹ ಕಾರ್ಯಕ್ರಮಗಳಲ್ಲಿ ಸಹ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶ್ರೀನಿವಾಸ್ ಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ರಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ರಮೇಶ್ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಸುನಂದಮ್ಮ, ಮುಂತಾದವರು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳಾದ ತಿಪ್ಪೇಸ್ವಾಮಿ, ಬಿ.ಆರ್.ಸಿ ಶ್ರೀನಿವಾಸ್ ಮೂರ್ತಿ, ಜಿಲ್ಲಾ ಖಜಾಂಚಿ ಶಿವಮೂರ್ತಿ, ಸಿ.ಆರ್.ಪಿ.ಆಶಾಲತಾ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮಮತಾದೇವಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಸುನಂದಮ್ಮ, ಕರ್ನಾಟಕ ಮಾಧ್ಯಮಅಕಾಡೆಮಿ ಪ್ರಶಸ್ತಿಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪ, ಪ್ರಾ.ಶಾ.ಶಿ.ಸಂಘದ ಜಿಲ್ಲಾ ಕಾರ್ಯದರ್ಶಿ ಹನುಮಂತರೆಡ್ಡಿ, ತಾಲ್ಲೂಕು ಶಿಕ್ಷಕರ ಸಂಘದ ಕಾರ್ಯದರ್ಶಿ ಕೋಟಿಲಿಂಗಯ್ಯ, ಸಂಘಟನಾ ಕಾರ್ಯದರ್ಶಿ ಶ್ರೀಮತಿ ದೇವರತ್ನ, ಸಹಕಾರ್ಯದರ್ಶಿ ಶ್ರೀಮತಿ ಹಸೀನಾ, ನಿರ್ದೇಶಕರುಗಳಾದ ಭಾಗ್ಯಮ್ಮ, ಮಾಜಿ ಅಧ್ಯಕ್ಷರಾದ ಶ್ರೀಮತಿ ಲೋಕಮ್ಮ, ಜೆ.ಟಿ.ತಿಮ್ಮಯ್ಯ, ಬಿ.ಎಂ.ಪ್ರಭುಸ್ವಾಮಿ, ಟಿ.ನಾಗರಾಜ್, ಎಂ.ರಮೇಶ್ ಸೇರಿದಂತೆ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಹಾಗೂ ಶಿಕ್ಷಕ-ಶಿಕ್ಷಕಿಯರು ಉಪಸ್ಥಿತರಿದ್ದರು.
