
ಹಿರಿಯೂರು :
ರಾಜ್ಯದಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ, ವಾರ್ಡನ್ ಗಳಿಗೆ ತಾಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ನಿರಂತರ ಶೋಷಣೆ ಮಾಡುತ್ತಾ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂಬುದಾಗಿ ನೌಕರರು ಆರೋಪಿಸಿದರು.
ನಗರದ ಸಮಾಜ ಕಲ್ಯಾಣ ಇಲಾಖೆ ಆವರಣದಲ್ಲಿ ಬುಧವಾರದಂದು ಹಾಸ್ಟೆಲ್ ಮತ್ತು ವಸತಿ ಶಾಲೆಗಳ ಹೊರಗುತ್ತಿಗೆ ನೌಕರರಿಗೆ ಪರಿಷ್ಕರಣೆ ಮಾಡಿರುವ ಕನಿಷ್ಠ ವೇತನವನ್ನು ತಕ್ಷಣ ಜಾರಿ ಮಾಡುವುದು ಹಾಗೂ ನೌಕರರ ಹುದ್ದೆಗಳನ್ನು ಖಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಹಾಸ್ಟೆಲ್ ಮತ್ತು ವಸತಿ ಶಾಲೆಗಳ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಿಗೆ ಮನವಿಪತ್ರ ಸಲ್ಲಿಸಿ, ಅವರು ಮಾತನಾಡಿದರು.

ರಾಜ್ಯ ಸರ್ಕಾರ ಹಾಗೂ ಕಾರ್ಮಿಕ ಇಲಾಖೆ ಹೊರಡಿಸಿರುವ ವೇತನ ಪರಿಷ್ಕರಣೆ ಕರಡು ಅಂತಿಮ ಅಧಿಸೂಚನೆಯನ್ನು ತಕ್ಷಣ ಜಾರಿ ಮಾಡಬೇಕು, ಎಲ್ಲಾ ಸಿಬ್ಬಂದಿಗೆ ನಿವೃತ್ತಿಯವರೆಗೆ ಸೇವಾಭದ್ರತೆ ನೀಡಬೇಕು, ವೇತನವನ್ನು ನೇರವಾಗಿ ಇಲಾಖೆಯ ಮೂಲಕ ವಿತರಿಸಬೇಕು ಎಂಬುದಾಗಿ ಪ್ರತಿಭಟನಾಕಾರರು ಆಗ್ರಹಿಸಿದರು.
ಕಾರ್ಮಿಕ ಕಾನೂನು ಪ್ರಕಾರ ಕಡ್ಡಾಯವಾಗಿ ವಾರಕ್ಕೆ ಒಂದು ರಜೆ ಕೊಡಬೇಕು, ಕೆಲಸದ ಸಮಯ ನಿಗದಿಯಾಗಬೇಕು, ಅಪಘಾತವಾದಾಗ ಇಲಾಖೆಯಿಂದ ಚಿಕಿತ್ಸೆ ಮತ್ತು ಪರಿಹಾರ ಕೊಡಬೇಕಲ್ಲದೆ, ಸುಪ್ರೀಂಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂಬುದಾಗಿ ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತ್, ಪ್ರಧಾನ ಕಾರ್ಯದರ್ಶಿ ಎನ್.ಪುನೀತ್ ಕುಮಾರ್, ಶಿವಲಿಂಗಯ್ಯ, ರಕ್ಷಿತಾ, ರಂಗಸ್ವಾಮಿ, ಆರ್.ತಿಪ್ಪೇಸ್ವಾಮಿ, ಜಿ.ಸಿದ್ದೇಶ್ವರ, ಉಮೇಶ್, ಕೋಮಲ, ಪಾರ್ವತಮ್ಮ, ಗೀತಮ್ಮ, ಹೇಮಾವತಿ, ಶ್ರುತಿ, ಅನ್ನಪೂರ್ಣ, ಮಂಜಮ್ಮ, ಲೋಕಮ್ಮ, ವಿಜಯಮ್ಮ, ಅಮೃತ, ವಿಜಯಲಕ್ಷ್ಮಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
