
ಹಿರಿಯೂರು :
ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾ ಗಣಪತಿಯ ವಿಸರ್ಜನೆ ನಿಮಿತ್ತ ಭಾನುವಾರ ನಗರದಲ್ಲಿ ಬೃಹತ್ ಶೋಭಾಯಾತ್ರೆ ಅದ್ದೂರಿಯಾಗಿ ನಡೆಯಿತು.
ಮಧ್ಯಾಹ್ನ 12 ಗಂಟೆಗೆ ಹುಳಿಯಾರು ರಸ್ತೆಯ ಹಿಂದೂ ಮಹಾಗಣಪತಿಯ ಭವ್ಯಮಂಟಪದಿಂದ ಶೋಭಾಯಾತ್ರೆ ಆರಂಭವಾಯಿತು. ಗಣೇಶೋತ್ಸವ ಸಮಿತಿ ಅಧ್ಯಕ್ಷ ನಾರಾಯಣರೆಡ್ಡಿ ಹಾಗೂ ಪದಾಧಿಕಾರಿಗಳು ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಜಾನಪದ ಕಲಾತಂಡಗಳು, ನಂದಿಕೋಲು, ವೀರಗಾಸೆ, ಕೋಲಾಟ ಮೆರವಣಿಗೆಗೆ ಮೆರುಗು ನೀಡಿದವು. ಡಿಜೆ ಸದ್ದಿಗೆ ಯುವಕ-ಯುವತಿಯರು ಹೆಜ್ಜೆ ಹಾಕಿ ಸಂಭ್ರಮಿಸಿದರು. ನೆಹರು ವೃತ್ತ ಬೆಂಗಳೂರು ರಸ್ತೆ, ಚರ್ಚ್ ರಸ್ತೆ, ಚಿತ್ರದುರ್ಗ ರಸ್ತೆಯ ಮೂಲಕ ಮೆರವಣಿಗೆ ಸಾಗಿತು.
ರಾತ್ರಿ 9:30ಕ್ಕೆ ಚಳ್ಳಕೆರೆ ರಸ್ತೆಯಲ್ಲಿರುವ ಬಾವಿಯಲ್ಲಿ ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು. ಮೆರವಣಿಗೆ ಸಾಗುವ ಮಧ್ಯದಲ್ಲಿ ಬಸ್ ಸಂಚಾರವನ್ನು ನಿಷೇಧಿಸಲಾಗಿತ್ತು. ಹೀಗಾಗಿ ಬಸ್ ಗಳು ಬೈಪಾಸ್ ರಸ್ತೆ ಮೂಲಕ ಸಂಚರಿಸಿದವು.
ಮೆರವಣಿಗೆಯಲ್ಲಿ ಭಾಗವಹಿಸಿದ್ದವರಿಗೆ ಅಲ್ಲಲ್ಲಿ ಲಘು ಉಪಹಾರ, ತಂಪು ಪಾನೀಯಗಳ ವ್ಯವಸ್ಥೆ ಮಾಡಲಾಗಿತ್ತು. ಹಿಂದೂಮಹಾಗಣಪತಿ ಶೋಭಾಯಾತ್ರೆ ಹಾಗೂ ವಿಸರ್ಜನಾ ಕಾರ್ಯಕ್ರಮಗಳು ನೂರಾರು ಜನ ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಭಜರಂಗದಳದ ಪ್ರಾಂತ ಬಿಲೋಪಾಸನ ಪ್ರಮುಖ್ ನರೇಶ್ ರೆಡ್ಡಿ ಈ ಕುರಿತು ಮಾತನಾಡಿ, ಸರ್ಕಾರದಿಂದ ಹಿಂದುಗಳ ಮೇಲೆ ಗದಾಪ್ರಹಾರ ನಡೆಯುತ್ತಿದ್ದು, ಗಣೇಶೋತ್ಸವಕ್ಕೆ ಅಸಹಕಾರ ಧೋರಣೆ ತಾಳಿದೆ ಎಂಬುದಾಗಿ ಶೋಭಾಯಾತ್ರೆಗೂ ಮುನ್ನ ಅಶೋಕ್ ಸಿಂಘಾಲ್ ವೇದಿಕೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಆರೋಪಿಸಿದರು.
ಎಂತದ್ದೇ ಸಂದರ್ಭ ಎದುರಾದರು ಹಿಂದೂಸಮಾಜ ಗಣೇಶ ಉತ್ಸವವನ್ನು ನಿಲ್ಲಿಸುವುದಿಲ್ಲ, ಬಾಲಗಂಗಾಧರ ತಿಲಕ್ ರವರು ಹಿಂದೂ ಸಮಾಜದ ಸಂಘಟನೆಗೆ ಗಣೇಶೋತ್ಸವ ಆರಂಭಿಸಿದ್ದಾರೆ, ಅದನ್ನು ನಮ್ಮ ಹಿಂದೂ ಸಮಾಜ ಮುಂದುವರಿಸುತ್ತಾ ಬಂದಿದೆ, ವಂದೇ ಮಾತರಂ ಗೀತೆಯನ್ನು ಮೊಟಕುಗೊಳಿಸುವ ಹುನ್ನಾರ ನಡೆಸಿದೆ. ಛತ್ರಪತಿ ಶಿವಾಜಿ ಮಹಾರಾಜರು ಹಿಂದೂ ಸಮಾಜಕ್ಕೆ ಶಕ್ತಿ ತುಂಬಿದರು, ಅದರಂತೆ ಇಂದಿನ ಎಲ್ಲಾ ಹಿಂದೂ ಯುವಕರು ಶಕ್ತಿಶಾಲಿಗಳಾಗಬೇಕು ಎಂದರು.
ಈ ಸಂದರ್ಭದಲ್ಲಿ ಹಿಂದೂ ಮಹಾಗಣಪತಿ ಪೂಜಾ ಸಮಿತಿ ಅಧ್ಯಕ್ಷರಾದ ನಾರಾಯಣರೆಡ್ಡಿ, ಸಮಿತಿ ಸದಸ್ಯರುಗಳಾದ ಆರ್.ಟಿ.ಪ್ರಶಾಂತ್, ಗೋವಿಂದಾಚಾರ್ಯ, ರಾಘವೇಂದ್ರ, ಮಂಜುನಾಥ್, ಎಂ.ಪ್ರಶಾಂತ್, ಜಗದೀಶ್, ಪ್ರಮೀಳಾ, ಬೋಜರಾಜ್, ಎನ್.ಎಸ್.ಜೋಧ, ದೇಸಾಯಿ, ಅಮರನಾಥ್, ಪ್ರಭಾಕರ್, ನಾಗದೇವ, ವಾಸದೇವ್, ಮಣಿ, ಚಿನ್ಮಯಾನಂದ, ವೇಣುಗೋಪಾಲ, ನವೀನ್, ಅಜ್ಜು, ನವೀನ್, ಆಚಾರ್ಯ, ಪ್ರೀತಂ, ಚೇತನ್, ರಂಜಿನಿ, ಸುಚಿತ್ರ, ಸ್ವರ್ಣರೆಡ್ಡಿ ಮೊದಲಾದವರು ಪಾಲ್ಗೊಂಡಿದ್ದರು. ಗೊಂಬೆ ಕುಣಿತ ಸೇರಿದಂತೆ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.
