
ನೆಲಮಂಗಲ / ಹಿರಿಯೂರು:
ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಅತ್ಯುತ್ತಮ ಹಾಗೂ ನಿರಂತರ ಸೇವೆಯನ್ನು ಪರಿಗಣಿಸಿ ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದ ಹಿರಿಯ ಪತ್ರಕರ್ತರಾದ ಅರ್ಜುನ್ ಬ್ಯಾಡರಹಳ್ಳಿ ಅವರಿಗೆ ಪ್ರತಿಷ್ಠಿತ “ಕರ್ನಾಟಕ ಮಾಧ್ಯಮ ರತ್ನ” ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ವತಿಯಿಂದ ನೆಲಮಂಗಲದ ಪುಷ್ಪ ಬೈರೇಗೌಡ ಕನ್ವೆನ್ಷನ್ ಹಾಲ್ನಲ್ಲಿ ದಿನಾಂಕ 08/08/2026 ರ ಶನಿವಾರದಂದು ಆಯೋಜಿಸಲಾಗಿದ್ದ 4ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಹಾಗೂ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಸವನಹಳ್ಳಿ ಶಿವಾನಂದ ಆಶ್ರಮದ ರಮಾನಂದಸ್ವಾಮೀಜಿ ಹಾಗೂ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಮಾತನಾಡಿ, ಹಿರಿಯ ಪತ್ರಕರ್ತರಾದ ಅರ್ಜುನ್ ಬ್ಯಾಡರಹಳ್ಳಿ ಅವರು ಪವರ್ ಫೋಕಸ್ ಸುದ್ದಿವಾಹಿನಿ ಮೂಲಕ ಅತ್ಯಂತ ಸಾಮಾಜಿಕ ಕಳಕಳಿ ಹೊಂದಿ, ಗ್ರಾಮೀಣ ಹಾಗೂ ಪ್ರಾದೇಶಿಕ ಸಮಸ್ಯೆಗಳ ಕುರಿತು ನಿರಂತರ ಧ್ವನಿ ಎತ್ತುತ್ತಾ, ಮಾಧ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು,ಇವರ ಸಾಮಾಜಿಕ ಕಳಕಳಿಯನ್ನು ಗುರುತಿಸಿ ನಮ್ಮ ಸಂಘಟನೆ ವತಿಯಿಂದ ಈ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಗಿದೆ ಎಂಬುದಾಗಿ ಹೇಳಿದರು.
