
ಹಿರಿಯೂರು :
ಕನ್ನಡ ಉಳಿವು. ಕನ್ನಡ ಭಾಷೆಯ ಸಂರಕ್ಷಣೆ ಹಾಗೂ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಶೇ.70ರಷ್ಟು ಉದ್ಯೋಗ ಮೀಸಲಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೀದರ್‌ನಿಂದ ಬೆಂಗಳೂರುವರೆಗೆ ಕಾಲ್ನಡಿಗೆ ಜಾಥಾ ಕೈಗೊಂಡಿದ್ದೇನೆ ಎಂಬುದಾಗಿ ರೂಪೇಶ್ ಪುತ್ತೂರು ತಿಳಿಸಿದರು.
ಚಿತ್ರದುರ್ಗದಿಂದ ಹಿರಿಯೂರು ನಗರಕ್ಕೆ ಆಗಮಿಸಿದ ಪಾದಯಾತ್ರೆ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸ್ವಾಗತಿಸಿ ಗೌರವಿಸಿ, ನಂತರ ಮಾತನಾಡಿದರು.
ರಾಜ್ಯದಾದ್ಯಂತ ಕನ್ನಡಿಗರ ಹಕ್ಕುಗಳ ಪರವಾಗಿ ಜಾಗೃತಿ ಮೂಡಿಸುವುದು ಹಾಗೂ ಕನ್ನಡ ಭಾಷೆಯ ಮಹತ್ವವನ್ನು ಜನರಿಗೆ ತಲುಪಿಸುವುದು ಈ ಜಾಥಾದ ಮುಖ್ಯ ಉದ್ದೇಶವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಶಾಲೆಗಳು ಮುಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ, ಸರ್ಕಾರವು ತಕ್ಷಣ ಕ್ರಮಕೈಗೊಂಡು ಕನ್ನಡಮಾಧ್ಯಮ ಶಿಕ್ಷಣಕ್ಕೆ ಉತ್ತೇಜನ ನೀಡಬೇಕು ಎಂಬುದಾಗಿ ಎಂದು ಆಗ್ರಹಿಸಿದರು.
ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ತಕ್ಕ ಮಟ್ಟಿನ ಉದ್ಯೋಗಾವಕಾಶ ದೊರೆಯುತ್ತಿಲ್ಲ ಎಂಬುದನ್ನು ಉಲ್ಲೇಖಿಸಿದ ಅವರು, ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಕಂಪನಿಗಳು ಸ್ಥಳೀಯರಿಗೆ ಆದ್ಯತೆ ನೀಡಬೇಕು. ಕನಿಷ್ಠ ಶೇ.70ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡುವಂತೆ ಕಾನೂನು ರೂಪಿಸಬೇಕು ಎಂಬುದಾಗಿ ಒತ್ತಾಯಿಸಿದರು.
ಈ ಕಾಲ್ನಡಿಗೆ ಜಾಥಾ ಮೂಲಕ ವಿವಿಧ ಜಿಲ್ಲೆಗಳ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಸಮಸ್ಯೆಗಳ ಕುರಿತು ಅರಿವು ಮೂಡಿಸಲಾಯಿತು, ಇದಕ್ಕೆ ವಿದ್ಯಾರ್ಥಿಗಳು, ಯುವಕರು ಹಾಗೂ ವಿವಿಧ ಸಂಘಟನೆಗಳ ಸದಸ್ಯರಿಂದ ಉತ್ತಮ ಬೆಂಬಲ ದೊರೆಯುತ್ತಿದೆ ಸರ್ಕಾರಕ್ಕೆ ಮನವಿ ಸಲ್ಲಿಸುವ ಮೂಲಕ ಈ ಬೇಡಿಕೆಗಳನ್ನು ಈಡೇರಿಸುವ ದಿಸೆಯಲ್ಲಿ ಮುಂದಿನ ಕ್ರಮ ರೂಪಿಸಲಾಗುವುದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರಾದ ರಾಮಕೃಷ್ಣಪ್ಪ, ಗೌರವಾಧ್ಯಕ್ಷರಾದ ಗೋ.ಬಸವರಾಜ್, ತಾಲೂಕು ಪ್ರಧಾನ ಕಾರ್ಯದರ್ಶಿ ಡಿ.ಕೆ.ಎಸ್. ದಾದಾಪೀರ್ ನಗರ ಅಧ್ಯಕ್ಷರಾದ ಮಹಮ್ಮದ್ ಜಾಕೀರ್, ಸುಹೇಲ್, ಭಾಷಾ, ಬೀಡಾಬಾಬು, ತಿಪ್ಪಣ್ಣ, ರಫೀಕ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
