July 29, 2026
0000001

ಹಿರಿಯೂರು :

ಮಾನ್ಯವಿರೋಧ ಪಕ್ಷದ ನಾಯಕರಾದ ಶ್ರೀಯುತ ಆರ್.ಅಶೋಕ್ ರವರು ಮಾಜಿ ಸಚಿವರಾದ ಬೈರತಿ ಬಸವರಾಜ್ ಹಾಗೂ ಎಂ.ಎಲ್.ಸಿ ನವೀನ್ ರವರೊಂದಿಗೆ ಹಿರಿಯೂರು ಕ್ಷೇತ್ರದ ಬರಪೀಡಿತ ರೈತರ ಜಮೀನುಗಳಿಗೆ ಭೇಟಿ ನೀಡಿ ಬರಪರಿಶೀಲನೆ ನಡೆಸಿ, ರೈತರು ಹಾಗೂ ಸ್ಥಳೀಯ ಕೃಷಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಈ ಕುರಿತು ರೈತರೊಂದಿಗೆ ಚರ್ಚೆ ನಡೆಸಿದ ವಿರೋಧ ಪಕ್ಷದ ನಾಯಕರಾದ ಶ್ರೀಯುತ ಆರ್.ಅಶೋಕ್ ರವರು,  ನಿಮ್ಮ ಜಮೀನುಗಳಿಗೆ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ನಿಮ್ಮ ಬೆಳೆಗಳನ್ನು ವೀಕ್ಷಿಸಿ, ನಿಮ್ಮ ಬೆಳೆ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆಯೇ ಎಂಬುದಾಗಿ ರೈತರನ್ನು ಪ್ರಶ್ನಿಸಿದರು.

ಸೂರಗೊಂಡನಹಳ್ಳಿಯ ರೈತರ ಜಮೀನುಗಳಿಗೆ ಭೇಟಿ ನೀಡಿದ ಅವರು ಮಳೆ ಇಲ್ಲದೆ ಒಣಗಿರುವ ಸೂರ್ಯಕಾಂತಿಬೆಳೆಯ ರೈತರ ಜಮೀನನ್ನು ಪ್ರತ್ಯಕ್ಷವಾಗಿ ಪರಿಶೀಲಿಸಿದ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ರೈತರು ಸಂಕಷ್ಟದಿಂದಿರುವಾಗ ಮುಖ್ಯಮಂತ್ರಿಗಳು ರೈತರ ಹಿತಾಸಕ್ತಿಯ ಕಡೆ ಗಮನಕೊಡದೆ  ಸಂಪುಟ ವಿಸ್ತರಣೆಗೆ ಗಮನಕೊಟ್ಟಿದ್ದಾರೆ.

ಸಂಪುಟ ವಿಸ್ತರಣೆ ಸ್ವಲ್ಪ ದಿನ ತಡವಾದರೂ ಪರವಾಗಿಲ್ಲ, ರೈತರ ಸಮಸ್ಯೆಗಳು ಪರಿಹಾರವಾಗಬೇಕು, ಮಳೆಯಿಲ್ಲದೆ ರೈತರ ಬೆಳೆಗಳು ಒಣಗುತ್ತಿರುವುದರಿಂದ ರೈತರ ಜೀವನ ಸಂಕಷ್ಟದಲ್ಲಿದೆ, ದೆಹಲಿಗೆ ಹೋಗಿ ಕಾಕ್ರೋಚ್ ಪಾರ್ಟಿ ಜೊತೆಗೆ ಸಭೆ ನಡೆಸಲಿಕ್ಕೆ ಹಾಗೂ ಮುಷ್ಕರ ಮಾಡಲಿಕ್ಕೆ ನಿಮಗೆ ಸಮಯವಿದೆ, ಆದರೆ ರಾಜ್ಯದ ರೈತರ ಹಿತಾಸಕ್ತಿಯ ಕಡೆ ಗಮನ ಹರಿಸಲು ನಿಮಗೆ ಸಮಯವಿಲ್ಲ, ರಾಜ್ಯದ ರೈತರನ್ನು ರಾಜ್ಯ ಸರ್ಕಾರ ಕಡೆಗಣಿತ್ತಿದೆ ಎಂದರು. 

ಶೀಘ್ರದಲ್ಲೇ ಆರಂಭವಾಗಲಿರುವ ವಿಧಾನಸಭಾ ಅಧಿವೇಶನದ ಕಲಾಪದಲ್ಲಿ ರೈತರ ಬರಪೀಡಿತ ಸಮಸ್ಯೆಯನ್ನು ಮೊದಲ ಆದ್ಯತೆಯಾಗಿ ತೆಗೆದುಕೊಂಡು ಚರ್ಚಿಸಲಾಗುತ್ತದೆ, ಅಧಿಕಾರಿಗಳು  ಬರಪೀಡಿತ ಜಮೀನುಗಳ ಮಾಹಿತಿಯನ್ನು ತೆಗೆದುಕೊಂಡು ಶೀಘ್ರವೇ ಬೆಳೆ ಪರಿಹಾರಕ್ಕೆ  ಕ್ರಮವಹಿಸಬೇಕು  ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ನಮಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕೆಲವು ರೈತರು ದೂರಿದರು,  ಇದಕ್ಕೆ ಪ್ರತಿಕ್ರಿಯಿಸಿದ ಆರ್.ಅಶೋಕ್ ರವರು ಬಸವರಾಜ್ ಬೊಮ್ಮಾಯಿ ಯವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಳೆ ಕಡಿಮೆಯಾದ ಒಂದೇ ತಿಂಗಳೊಳಗೆ ಬೆಳೆ ಪರಿಹಾರ ನೀಡಿದ್ದರು,  ಆದರೆ ಮಳೆ ಬರದೆ 50ರಿಂದ 60 ದಿನ ಕಳೆದು ಹೋದರು ಸಹ ಈಗಿನ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಯಾದವ್,  ಬಿಜೆಪಿ ಮುಖಂಡರು ಹಾಗೂ ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷರಾದ ರಾಜಣ್ಣ,  ಹಿರಿಯೂರು ಮಂಡಲ ಅಧ್ಯಕ್ಷ ಅಭಿನಂದನ್,   ಬಿಜೆಪಿ ಮುಖಂಡರಾದ ಲಕ್ಷ್ಮಿಕಾಂತ್, ವಿಶ್ವನಾಥ್,  ಆಲೂರುತಮ್ಮಣ್ಣ, ದ್ಯಾಮಣ್ಣ, ಎನ್.ಧನಂಜಯ, ಸಂಪತ್ ಕುಮಾರ್, ಜಗದೀಶ್, ನಿತಿನ್, ಯೋಗೇಶ್,  ಹನುಮಂತು,   ಪ್ರದೀಪ್,   ಗೋವಿಂದ್  ಬಸವರಾಜ್, ಜೋಧಾ, ದೇವರಾಜ್, ಮಲ್ಲೇಶ್, ಹಾಲೇಶ್, ಪಾರ್ಥ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *