
ಹಿರಿಯೂರು :
ಮನೆಯ ಯಜಮಾನನಾಗಿ ಮನೆಯ ಸಂಪೂರ್ಣ ನಿರ್ವಹಣೆ ಭಾರ ಹೊತ್ತಿರುವ ತಂದೆಯ ಸ್ಥಾನ ಸಮಾಜದಲ್ಲಿ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದ್ದು, ತಂದೆಯು ಒಂದು ಕುಟುಂಬದ ಶಕ್ತಿಯಾಗಿ ಗುರುತಿಸಿಕೊಳ್ಳುತ್ತಾನೆ, ತನ್ನ ಹೆಂಡತಿ-ಮಕ್ಕಳ ಅಗತ್ಯತೆಗಳನ್ನು ಪೂರೈಸುವ ಗುರುತರ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ತಂದೆಯ ಅಸ್ತಿತ್ವವನ್ನು ಮಕ್ಕಳಿಗೆ ತಿಳಿಸುವ ಉದ್ದೇಶದಿಂದ ನಮ್ಮ ಶಾಲೆಯಲ್ಲಿ “ಫಾದರ್ಸ್ ಡೇ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆಲೂರು ಹನುಮಂತರಾಯಪ್ಪ ಹೇಳಿದರು.
ನಗರದ ವಾಣಿವಿಲಾಸ ವಿದ್ಯಾಸಂಸ್ಥೆಯ ಆವರಣದಲ್ಲಿ “ಅಪ್ಪಂದಿರ ದಿನದ” ಅಂಗವಾಗಿ ಎಲ್.ಕೆ.ಜಿ ಹಾಗೂ ಯು.ಕೆ.ಜಿ ಮಕ್ಕಳಿಗೆ ಹಮ್ಮಿಕೊಳ್ಳಲಾಗಿದ್ದ “ಫಾದರ್ಸ್ ಡೇ” ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ, ನಂತರ ಅವರು ಮಾತನಾಡಿದರು.

ಸಮಾಜದ ಪ್ರತಿಯೊಬ್ಬ ತಂದೆಯೂ ತಮ್ಮ ಮಕ್ಕಳ ಭವಿಷ್ಯವನ್ನು ಉಜ್ಚಲಗೊಳಿಸಬೇಕೆಂಬ ಉದ್ದೇಶದಿಂದ ತಮ್ಮ ಕುಟುಂಬದ ಸಂತೋಷ-ಸಂಭ್ರಮಕ್ಕಾಗಿ ಹಗಲು-ರಾತ್ರಿ ಎನ್ನದೆ ಕಷ್ಟಪಟ್ಟು ದುಡಿಯುತ್ತಾನೆ, ಇಂತಹ ತಂದೆಯ ನೆರಳಿನಲ್ಲಿ ಬೆಳೆಯುವ ಮಕ್ಕಳಿಗೆ ತಂದೆಯ ಪ್ರೀತಿ, ಕಾಳಜಿ, ಪರಿಶ್ರಮ ಅರ್ಥಮಾಡಿಸುವ ಒಂದು ಸಣ್ಣ ಪ್ರಯತ್ನವನ್ನು ನಮ್ಮ ಸಂಸ್ಥೆ ವತಿಯಿಂದ ಮಾಡಲಾಗುತ್ತಿದ್ದು, ಇದಕ್ಕೆ ಸಹಕಾರ ನೀಡಿದಂತಹ ಎಲ್ಲಾ ತಂದೆ-ತಾಯಿಗಳಿಗೆ ಹಾಗೂ ಶಿಕ್ಷಕರಿಗೆ ಧನ್ಯವಾದಗಳು ಎಂಬುದಾಗಿ ಹೇಳಿದರು.

ಒಬ್ಬ ತಂದೆಯಾದವನು ತನ್ನ ಕುಟುಂಬದ ಸಂತೋಷವನ್ನೇ ತನ್ನ ಸಂತೋಷವೆಂದು ಭಾವಿಸಿ, ಅವರ ಸಂಭ್ರಮದಲ್ಲಿ ತನ್ನ ಸಂತೋಷವನ್ನು ಕಾಣುವ ತಂದೆಯ ತ್ಯಾಗಮಯ ವ್ಯಕ್ತಿತ್ವವನ್ನು ಪ್ರತಿ ಮನೆಯಲ್ಲೂ ಹೆಂಡತಿ ಹಾಗೂ ಮಕ್ಕಳು ಅರ್ಥಮಾಡಿಕೊಳ್ಳುವ ಮೂಲಕ ತಂದೆಯನ್ನು ಗೌರವಿಸುವಂತಾಗಬೇಕೆಂಬ ಉದ್ದೇಶದಿಂದ ನಮ್ಮ ಶಾಲೆಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಮಕ್ಕಳ ತಂದೆತಾಯಿಗಳು ಆಗಮಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿರುವುದು ನಿಜಕ್ಕೂ ಸಂತಸವನ್ನು ಉಂಟುಮಾಡಿದೆ ಎಂಬುದಾಗಿ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿಯ ಪುಟ್ಟ ಮಕ್ಕಳಿಂದ ಅಪ್ಪನ ಕುರಿತಾದ ಹಾಡುಗಳ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳ ತಂದೆಯರಿಗೆ ಕ್ರೀಡೆಗಳನ್ನು ಆಡಿಸುವ ಮೂಲಕ ಭಾಗವಹಿಸಿದ ಅಪ್ಪಂದಿರಿಗೆಲ್ಲಾ ನೆನಪಿಗೆ ಕಾಣಿಕೆ ನೀಡಲಾಯಿತು. ಎಲ್ಲಾ ಅಪ್ಪಂದಿರು ತಮ್ಮ ಮಕ್ಕಳೊಂದಿಗೆ ನೃತ್ಯ ಮಾಡುವ ಮೂಲಕ ಕುಣಿದು ಸಂಭ್ರಮಿಸಿದರು.

ಈ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿ ಶ್ರೀಮತಿ ಸೌಮ್ಯ, ವ್ಯವಸ್ಥಾಪಕಿ ಶ್ರೀಮತಿ ವಸಂತಾ, ಆಡಳಿತಾಧಿಕಾರಿ ಶ್ರೀಮತಿ ಹೇಮಲತಾ, ಕಾರ್ಯಕ್ರಮದ ಸಂಯೋಜಕರಾದ ಶ್ರೀಮತಿ ಭಾಗ್ಯ, ಶ್ರೀಮತಿ ಜಯಸುಧಾ, ಶ್ರೀಮತಿ ಗೌತಮಿ, ಕುಮಾರಿ ಪೂಜಾ, ಶಿವರಾಜ್ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು, ಶಿಕ್ಷಕ-ಶಿಕ್ಷಕಿಯರು, ಶಾಲಾ ಸಿಬ್ಬಂದಿಗಳು, ಉಪಸ್ಥಿತರಿದ್ದರು.
