July 29, 2026
000000000000002

ಹಿರಿಯೂರು :      

ಬೆಂಗಳೂರು ನಗರ ಇದೀಗ ಸಿಲಿಕಾನ್ ಸಿಟಿಯೆಂದೇ ಜಗತ್ತಿನಾದ್ಯಂತ ಹೆಸರು ಮಾಡಲು ಕಾರಣೀಕರ್ತರಾದ ನಾಡಪ್ರಭು ಕೆಂಪೇಗೌಡರು ಜಾತ್ಯಾತೀತ ವ್ಯಕ್ತಿಯಾಗಿದ್ದು, ಅವರನ್ನು ಯಾವುದೇ ಒಂದು ಜಾತಿ ಜನಾಂಗಕ್ಕೆ ಸೀಮಿತಗೊಳಿಸಬಾರದು ಅವರು ಸರ್ವ ಜನಾಂಗದ ನಾಯಕರಾಗಿದ್ದಾರೆ ಎಂಬುದಾಗಿ ವಾಣಿ ಸಕ್ಕರೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಧರಣೇಂದ್ರಯ್ಯ ಅವರು ಹೇಳಿದರು.

ನಗರದ ನಗರಸಭೆ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ “ನಾಡಪ್ರಭು ಕೆಂಪೇಗೌಡರ 517 ನೇ ಜಯಂತಿ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ನಾಡಪ್ರಭು ಕೆಂಪೇಗೌಡರು ಅತ್ಯಂತ ದಕ್ಷ ಆಡಳಿತಗಾರರು ಹಾಗೂ ದೂರದೃಷ್ಠಿಯುಳ್ಳ ನಾಯಕರಾಗಿದ್ದು, ಸಮಾಜದ ಎಲ್ಲಾ ವರ್ಗದ ಜನರ ಹಿತವನ್ನು ಬಯಸುವ ನಿಟ್ಟಿನಲ್ಲಿ ಅಂದು ಸಮಾಜದ ಎಲ್ಲಾ ವರ್ಗದ ಜನರ ಹೆಸರಿನಲ್ಲಿ ಪೇಟೆಗಳನ್ನು ನಿರ್ಮಿಸುವ ಮೂಲಕ ಸರ್ವರಿಗೂ ಸಮಪಾಲು, ಎಂಬ ತತ್ವದ ಆಧಾರದ ಮೂಲಕ ಸಮಾಜದ ಸರ್ವಜನಾಂಗದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದರು ಎಂಬುದಾಗಿ ಅವರು ಹೇಳಿದರು.

ನಾಡಪ್ರಭು ಕೆಂಪೇಗೌಡರು ನಗರದ ಸಾರಿಗೆ ವ್ಯವಸ್ಥೆಗಾಗಿ ಉತ್ತಮ ರಸ್ತೆಗಳನ್ನು ನಿರ್ಮಿಸಿದರಲ್ಲದೆ, ರಸ್ತೆಯುದ್ದಕ್ಕೂ ಗಿಡ-ಮರಗಳನ್ನು ನೆಡಿಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಿದ್ದರು, ಕೃಷಿಕರ ಅನುಕೂಲಕ್ಕಾಗಿ ನೂರಾರು ಕೆರೆಗಳನ್ನು ನಿರ್ಮಿಸಿ, ನೀರಿನ ವ್ಯವಸ್ಥೆ ಕಲ್ದಿಸಿದ್ದ ಅವರು ಅನೇಕ ಉದ್ಯಾನವನಗಳನ್ನು ನಿರ್ಮಾಣ ಮಾಡುವ ಮೂಲಕ ಸುಂದರ ನಗರವನ್ನಾಗಿ ಮಾಡಿದ್ದರು,

ಸಮಾಜಕ್ಕೆ ಸಂಸ್ಕಾರವನ್ನು ಕೊಟ್ಟ ನಾಡಪ್ರಭು ಕೆಂಪೇಗೌಡರವರು ಧೀಮಂತನಾಯಕರಾಗಿದ್ದು, ಇವರ ಸಮಾಧಿಯ ಸ್ಥಳವನ್ನು ರಾಜ್ಯ ಸರ್ಕಾರ ಪುನಶ್ಚೇತನಗೊಳಿಸಲು ಮುಂದಾಗಬೇಕೆಂದು ಮನವಿ ಮಾಡಿದರಲ್ಲದೆ, ಇಂತಹ ಮಹಾನ್ ನಾಯಕ ನಾಡಪ್ರಭು ಕೆಂಪೇಗೌಡರವರ ತತ್ವ-ಆದರ್ಶಗಳನ್ನು  ಇಂದಿನ ಯುವಜನತೆ ಅಳವಡಿಸಿಕೊಳ್ಳಬೇಕು ಎಂಬುದಾಗಿ ಹೇಳಿದರು.

ಒಕ್ಕಲಿಗ ಸಮಾಜದ ಮುಖಂಡರು ಹಾಗೂ ಜಿ.ಪಂ.ಮಾಜಿ ಅಧ್ಯಕ್ಷರಾದ ಜಯಣ್ಣಪಿಲಾಜನಹಳ್ಳಿ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಒಕ್ಕಲಿಗರಿಗಷ್ಟೇ ನಾಯಕರಲ್ಲ, ಅವರು ಸರ್ವ ಜನಾಂಗದ ನಾಯಕರಾಗಿದ್ದು, ಎಲ್ಲಾ ಜಾತಿ ಜನಾಂಗದವರೂ ಒಗ್ಗಟ್ಟಾಗಿ ಸೇರಿ ನಾಡಪ್ರಭು ಕೆಂಪೇಗೌಡರ ಜಯಂತ್ಯೋತ್ಸವವನ್ನು ಆಚರಿಸುವಂತಾಗಬೇಕು, ನಮ್ಮೆಲ್ಲ ಒಕ್ಕಲಿಗರ ಸಮಾಜದವರು ನಮ್ಮ ತಾಲ್ಲೂಕಿನ ನೊಂದವರ, ದೀನರ ನೆರವಿಗೆ ಮುಂದಾಗಬೇಕು ಎಂಬುದಾಗಿ ಹೇಳಿದರು.

ಕಾಂಗ್ರೆಸ್ ಮುಖಂಡರಾದ ಆರ್.ಮಂಜುನಾಥ್ ಮಾತನಾಡಿ, ನಾಡಪ್ರಭು ಕಂಪೇಗೌಡರು ನಿರ್ಮಿಸಿದ ಬೆಂಗಳೂರು ಇದೀಗ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ್ದು, ಬೆಂಗಳೂರಿನಲ್ಲಿ ತಿಗಳರು ನಡೆಸುವ ಇತಿಹಾಸಿಪ್ರಸಿದ್ಧ ಕರಗ ಕಾರ್ಯಕ್ರಮವು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದೆ, ಈ ಕರಗ ಕಾರ್ಯಕ್ರಮವನ್ನು ಪರಿಚಯಿಸಿದ ಕೀರ್ತಿಯೂ ಸಹ ನಮ್ಮ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ ಎಂಬುದಾಗಿ ಹೇಳಿದರು.

ಜೆಡಿಎಸ್ ಮುಖಂಡ ಡಿ.ಯಶೋಧರ ಮಾತನಾಡಿ, ಬೆಂಗಳೂರಿನಲ್ಲಿ ಕೆರೆ-ಕಟ್ಟೆ, ಕೋಟೆ-ಪೇಟೆಗಳನ್ನು ಕಟ್ಟಿದಂತಹ ನಾಡಪ್ರಭು ಕಂಪೇಗೌಡರು ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಸುವ ಮೂಲಕ ಬದುಕು ಕಟ್ಟಿಕೊಟ್ಟಿದ್ದಾರೆ, ಅಂದು ಅವರು ನಿರ್ಮಾಣ ಮಾಡಿದ ಬೆಂಗಳೂರು ಇದೀಗ ಬೃಹತ್ ಸಿಲಿಕಾನ್ ಸಿಟಿಯಾಗಿ ಬೆಳೆದು ಲಕ್ಷಾಂತರ ಜನರಿಗೆ ಆಶ್ರಯ ನೀಡುವ ಮೂಲಕ ಇಡೀ ವಿಶ್ವದ ಗಮನವನ್ನು ತನ್ನೆಡೆಗೆ ಸೆಳೆದಿದೆ ಎಂದರು.

ಕೆಂಪೇಗೌಡ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಂದಿಕೆರೆಜಗದೀಶ್ ಮಾತನಾಡಿ, ತಾಲ್ಲೂಕಿನ ಎಲ್ಲಾ ಶಾಲೆಗಳಲ್ಲಿ ನಾಡಪ್ರಭು ಕೆಂಪೇಗೌಡರ ಚರಿತ್ರೆಯನ್ನು ನೆನಪಿಸುವಂತಹ ಭಾಷಣಸ್ಪರ್ಧೆ, ಚರ್ಚಾಸ್ಪರ್ಧೆ, ಪ್ರಬಂಧ, ಚಿತ್ರಕಲೆಯಂತಹ ಸ್ಪರ್ಧೆಗಳನ್ನು ನಡೆಸಿ, ವಿಜೇತರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡುವ ಕಾರ್ಯಕ್ರಮವನ್ನು ತಾಲ್ಲೂಕು ಆಡಳಿತ  ಈವರ್ಷದಿಂದಲೇ ಜಾರಿಗೆ ತರಬೇಕು ಎಂಬುದಾಗಿ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಬಿ.ಹೆಚ್.ಮಂಜುನಾಥ್ ಹಾಗೂ ಶ್ರೀಮತಿ ಪಾರ್ವತಮ್ಮರುದ್ರಮುನಿ ಮಾತನಾಡಿದರು. ಈ ಸಂದರ್ಭದಲ್ಲಿ ನೃತ್ಯ ನಿರ್ದೇಶಕ ಅವಿರಾಜ್ ಮತ್ತು ತಂಡದವರು ಕೆಂಪೇಗೌಡರ ನೃತ್ಯರೂಪಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ತಹಶೀಲ್ದಾರರಾದ ಎಂ.ಸಿದ್ದೇಶ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ, ಒಕ್ಕಲಿಗರ ಸಮಾಜದ ಅಧ್ಯಕ್ಷರಾದ ರಾಮಚಂದ್ರಪ್ಪ, ಕಾರ್ಯದರ್ಶಿ ಜಿ.ಏಕಾಂತಪ್ಪ, ಜೆಡಿಎಸ್ ಮುಖಂಡರಾದ ಡಿ.ಯಶೋಧರ್, ಪಿಲಾಜನಹಳ್ಳಿಜಯಣ್ಣ, ಕಾಂಗ್ರೆಸ್ ಮುಖಂಡರಾದ ಆರ್.ಮಂಜುನಾಥ್, ಸಾದತ್ ವುಲ್ಲಾ, ದಾದಾಪೀರ್, ರಾಜ್ಯ ರೈತಸಂಘದ ಉಪಾಧ್ಯಕ್ಷ ಕೆ.ಸಿ.ಹೊರಕೇರಪ್ಪ, ಕೃಷಿಕ ಸಮಾಜದ ಅಧ್ಯಕ್ಷ ಚಿಗಳಿಕಟ್ಟೆಕಾಂತರಾಜ್, ರೈತಮುಖಂಡ ಹೆಚ್.ಆರ್.ತಿಮ್ಮಯ್ಯ, ಮನವಿ ಟ್ರಸ್ಟ್ ಅಧ್ಯಕ್ಷೆ ಶ್ರೀಮತಿ ಮಾನಸ ಮಂಜುನಾಥ್, ಒಕ್ಕಲಿಗರ ಸಂಘದ ಮಹಿಳಾ ಘಟಕದ ಅಧ್ಯಕ್ಷರಾದ ಮಮತಾಕೃಷ್ಣಮೂರ್ತಿ, ಕಲ್ಪನಾಶೇಖರ್, ರಮ್ಯಾರಾಜು, ಜ್ಞಾನೇಶ್ವರಿ, ಹೆಚ್.ಹೇಮಲತಾ, ಶ್ರೀಮತಿವಸಂತಾ, ಕುಸುಮಯೋಗೇಶ್, ಒಕ್ಕಲಿಗ ಸಮಾಜದ ಮುಖಂಡರಾದ ಕಂದಿಕೆರೆ ಜಗದೀಶ್, ಜಯಕುಮಾರ್, ಜಲದಣ್ಣ, ಶಂಕರಮೂರ್ತಿ, ನಿತಿನ್, ಮುಕುಂದ, ಕಂದಿಕೆರೆರಂಗನಾಥ್, ಚಿಲ್ಲಹಳ್ಳಿಶಿವಣ್ಣ, ಧ್ರುವಕುಮಾರ್, ವಕೀಲರುಗಳಾದ ಜೆ.ಪಿ.ಪ್ರಶಾಂತ್, ಶಿವಕುಮಾರ್, ಡಾ.ಕೆ.ಟಿ.ಪ್ರಕಾಶ್, ಆರ್.ಗೌಡ, ರೈತಮುಖಂಡರಾದ ಬ್ಯಾಡರಹಳ್ಳಿಶಿವಕುಮಾರ್, ಟಿಎಪಿಸಿಎಂಎಸ್. ಅಧ್ಯಕ್ಷ ಶ್ರವಣಗೆರೆಹನುಮಂತರಾಯಪ್ಪ, ಕೋವೇರಹಟ್ಟಿ ತಿಪ್ಪೇಸ್ವಾಮಿ, ಹಿರಿಯಪತ್ರಕರ್ತರಾದ ಆಲೂರು ಹನುಮಂತರಾಯಪ್ಪ, ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಪತ್ರಕರ್ತರು ಹಾಗೂ ವಿವಿಧ ಇಲಾಖೆಯ ಅಧಿಕಾರಿವರ್ಗದವರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *