
ಹಿರಿಯೂರು :
ಶೈಕ್ಷಣಿಕ ವರ್ಷದ ಆರಂಭವನ್ನು ಮಕ್ಕಳ ಅಧ್ಯಯನಕ್ಕೆ ಪೂರಕವಾದ ವಾತಾವರಣದೊಂದಿಗೆ ಪ್ರಾರಂಭಿಸಿ, ಶಾಲೆ ಆವರಣವನ್ನು ಸ್ವಚ್ಛಗೊಳಿಸಿ, ಸಿಹಿ ಊಟ ನೀಡುವುದರೊಂದಿಗೆ ಶಾಲೆಯನ್ನು ಆರಂಭಿಸಬೇಕು, ಈ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ದಾಖಲಾತಿ ಹೆಚ್ಚಾಗಲು ಕ್ರಮವಹಿಸಬೇಕು ಎಂಬುದಾಗಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಂ.ಆರ್.ಮಂಜುನಾಥ್ ಕರೆ ನೀಡಿದರು.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ತಾಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢಶಾಲೆಗಳ ಮುಖ್ಯಶಿಕ್ಷಕರುಗಳಿಗೆ ಶಾಲಾ ಪ್ರಾರಂಭೋತ್ಸವದ ಸಿದ್ಧತೆಯ ಕುರಿತು ಕರೆಯಲಾಗಿದ್ದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ, ನಂತರ ಅವರು ಮಾತನಾಡಿದರು.

ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಫಲಿತಾಂಶ ನೀಡಿದ್ದು, ಈ ವರ್ಷವೂ ಸಹ ಉತ್ತಮ ಫಲಿತಾಂಶ ಪಡೆಯಲು ಪ್ರಾರಂಭದಲ್ಲಿಯೇ ಕ್ರಿಯಾ ಯೋಜನೆಯನ್ನು ಎಲ್ಲಾ ಶಿಕ್ಷಕರು ಮತ್ತು ಶಾಲೆಗಳು ರೂಪಿಸಿಕೊಳ್ಳಬೇಕು, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಶಾಲೆ ಆವರಣರದ ಜೊತೆಗೆ ಅಡುಗೆಕೋಣೆಗಳನ್ನು ಸ್ವಚ್ಛಗೊಳಿಸಬೇಕು
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಖಾಲಿ ಹುದ್ದೆಗಳಿಗೆ ಅತಿಥಿ ಶಿಕ್ಷಕರ ಅಗತ್ಯವಿದ್ದಲ್ಲಿ ನಮ್ಮ ಕಚೇರಿಗೆ ಮಾಹಿತಿ ನೀಡಬೇಕು, ಮಕ್ಕಳ ಸುರಕ್ಷತೆ ಹಾಗೂ ಕಲಿಕೆಯನ್ನು ಉತ್ತಮ ಪಡಿಸಲು ಚಟುವಟಿಕೆ ಆಧಾರಿತ ಬೋಧನೆಗೆ ಹಾಗೂ ಗುಣಾತ್ಮಕ ಬೋಧನೆಗೆ ಹೆಚ್ಚು ಒತ್ತು ನೀಡಬೇಕು ಎಂಬುದಾಗಿ ಹೇಳಿದರು.

ಕ್ಷೇತ್ರ ಸಮನ್ವಯಾಧಿಕಾರಿಗಳಾದ ಆರ್.ಟಿ.ಎಸ್.ಶ್ರೀನಿವಾಸ್ ಮಾತನಾಡಿ, ಶಿಕ್ಷಣ ಇಲಾಖೆಯ ನಿಯಮದಂತೆ ಜೂನ್ ತಿಂಗಳಿನಲ್ಲಿ ಸೇತುಬಂಧ ಕಾರ್ಯಕ್ರಮವನ್ನು ನಿರ್ವಹಿಸಬೇಕು ಹಾಗೂ ಎಲ್ಲಾ ಶಾಲೆಗಳು ಶಾಲಾ ಶೈಕ್ಷಣಿಕ ಯೋಜನೆಯನ್ನು ಸಿದ್ಧಪಡಿಸಿ ಅದರಂತೆ ಅನುಪಾಲನೆ ಮಾಡಬೇಕು ಎಂಬುದಾಗಿ ಹೇಳಿದರು.
ಮಧ್ಯಾಹ್ನ ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ಚಿತ್ರಾಲಮಹೇಶ್ವರರೆಡ್ಡಿ ಮಾತನಾಡಿ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮುಖ್ಯಶಿಕ್ಷಕರು ಪ್ರತಿ ತಿಂಗಳು ಉಪಯೋಗಿತ ಪ್ರಮಾಣಪತ್ರ ಹಾಗೂ ಧಾನ್ಯಗಳ ಬೇಡಿಕೆಪಟ್ಟಿಯನ್ನು ಅಕ್ಷರದಾಸೋಹ ಕಛೇರಿಗೆ ನೀಡಬೇಕು ಎಂಬುದಾಗಿ ಹೇಳಿದರು.

ಬಿ.ಆರ್.ಪಿ ಪ್ರಸನ್ನಕುಮಾರ್ ಮಾತನಾಡಿ, ಎಲ್ಲಾ ಶಾಲೆಗಳ ಮುಖ್ಯಶಿಕ್ಷಕರು ಯುಡೈಸ್ ಪ್ಲಸ್ ಹಾಗೂ ಸ್ಯಾಟ್ಸ್ ದಾಖಲೆಗಳನ್ನು ಸರಿಯಾದ ಸಮಯಕ್ಕೆ ಆನ್ ಲೈನ್ ಮೂಲಕ ಸಲ್ಲಿಸಬೇಕು, ಆನ್ ಲೈನ್ ಚಟುವಟಿಕೆಗಳ ನಿರ್ವಹಣೆಯಲ್ಲಿ ಯಾವುದೇ ಗೊಂದಲಗಳಿದ್ದರೆ ನಮ್ಮ ಇಲಾಖೆಯಿಂದ ಮಾಹಿತಿ ಪಡೆದುಕೊಳ್ಳಬೇಕು ಎಂಬುದಾಗಿ ಹೇಳಿದರು.
ಈ ಸಭೆಯಲ್ಲಿ ತಾಲ್ಲೂಕು ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷರಾದ ವಿ.ಭಾಗ್ಯ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಲೋಹಿತ್, ಕಾರ್ಯದರ್ಶಿ ಮಂಜುನಾಥ್, ಟಿ ಪಿ ಇ ಓ ರವೀಂದ್ರನಾಥ್, ಇಸಿಓಗಳಾದ ಸೈಯದ್ ಜಾಫರ್, ನಾಗರಾಜ್, ಪುಟ್ಟಸ್ವಾಮಿ, ರಂಗಸ್ವಾಮಿ, ಶಿವಾನಂದ, ಮತ್ತು ತಾಲೂಕಿನ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.
