
ಹಿರಿಯೂರು :
ಇದೇ ಮೇ 29ರ ಶುಕ್ರವಾರದಿಂದ ಶಾಲೆಗಳು ಪುನರಾರಂಭವಾಗುತ್ತಿದ್ದು, ನಿಮ್ಮ ಶಾಲೆಯ ದಾಖಲಾತಿಯನ್ನು ಹೆಚ್ಚಿಸುವಲ್ಲಿ ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರು, ಕ್ರಮವರಿತು, ಕೆಲಸ ನಿರ್ವಹಿಸಿ, ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಮುಂದಾಗಬೇಕು ಎಂಬುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ ಕರೆನೀಡಿದರು.
ತಾಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ ನಗರದ ಗುರುಭವನದಲ್ಲಿ ಹಮ್ಮಿಕೊಂಡಿದ್ದ ಪ್ರಸ್ತುತ ಸಾಲಿನ ಶಾಲಾ ಪ್ರಾರಂಭೋತ್ಸವ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಪ್ರಾರಂಭೋತ್ಸವಕ್ಕೂ ಮೊದಲು ಶಾಲಾ ಪರಿಸರವನ್ನು ಸ್ವಚ್ಛಗೊಳಿಸುವುದು, ಶಾಲಾ ಮಕ್ಕಳಿಗೆ ಇಲಾಖೆ ನೀಡಿರುವ ಉಚಿತ ಪಠ್ಯಪುಸ್ತಕಗಳನ್ನು ನೀಡಬೇಕು, ಇಲಾಖಾ ನಿಯಮಾನಸಾರ ಪಠ್ಯ ಬೋಧನೆ ಕ್ರಿಯಾತ್ಮಕವಾಗಿರಬೇಕು, ಮಕ್ಕಳ ರಕ್ಷಣಾ ನೀತಿಗೆ ಸಂಬಂಧಿಸಿದಂತೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದರಲ್ಲದೆ,
ಇಲಾಖೆ ಜಾರಿಗೆ ತಂದಿರುವ ಕರ್ತವ್ಯ ಆಪ್ ನಲ್ಲಿ ಶಾಲೆ ಆರಂಭಕ್ಕೂ ಮೊದಲು ಮತ್ತು ಶಾಲಾ ಸಮಯದ ನಂತರ ಹಾಜರಾತಿಯನ್ನು ಶಾಲೆಯ ಪರಿಧಿಯೊಳಗೆ ಇಂದೀಕರಿಸಬೇಕು, ಯಾವುದೇ ತಾಂತ್ರಿಕ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ಶಿಕ್ಷಣ ಇಲಾಖೆಯೊಂದಿಗೆ ಚರ್ಚಿಸಿ, ಅದನ್ನು ಪರಿಹರಿಸಿಕೊಳ್ಳಬೇಕು ಎಂದು ಹೇಳಿದರು.
ಕ್ಷೇತ್ರ ಸಮನ್ವಯಾಧಿಕಾರಿ ಆರ್.ಟಿ.ಎಸ್. ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಶೈಕ್ಷಣಿಕ ವರ್ಷದಿಂದಲೇ ರಾಜ್ಯದಲ್ಲಿ ದ್ವಿಭಾಷಾ ಮಾಧ್ಯಮ (ಕನ್ನಡ ಮತ್ತು ಇಂಗ್ಲಿಷ್) ಪ್ರಾರಂಭವಾಗಲಿದ್ದು, ತಾಲ್ಲೂಕಿನಲ್ಲಿ ಈ ನಿಟ್ಟಿನಲ್ಲಿ ಶಾಲೆಗಳು ಪ್ರಾರಂಭವಾಗುವ ಮುನ್ನವೇ ಈ ಬಗ್ಗೆ ಶಾಲಾ ಶಿಕ್ಷಕರಿಗೆ ಈಗಾಗಲೇ ಅಗತ್ಯ ತರಬೇತಿಯನ್ನು ನೀಡಿದ್ದು, ಸೂಕ್ತ ರೀತಿಯಲ್ಲಿ ತರಗತಿ ನಿರ್ವಹಿಸಬೇಕು ಎಂಬುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿರುವ ಮುಖ್ಯ ಶಿಕ್ಷಕರು ಕೈಗೊಳ್ಳಬೇಕಾದ ಕಾರ್ಯ ಚಟುವಟಿಕೆಗಳ ಬಗ್ಗೆ ಆರ್. ಟಿ. ಎಸ್. ಶ್ರೀನಿವಾಸ್ ವಿವರವಾಗಿ ಮಾಹಿತಿ ನೀಡಿದರು. ಇಸಿಓ ಪುಟ್ಟಸ್ವಾಮಿ ಚುನಾವಣಾ ಕರ್ತವ್ಯ ಮತ್ತು ಶೂ ಸಾಕ್ಸ್ ವಿತರಣೆ ಬಗ್ಗೆ ಮಾಹಿತಿ ನೀಡಿದರು. ಇಸಿಓ ರಂಗಸ್ವಾಮಿ ಸಮವಸ್ತ್ರ ಮತ್ತು ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ನೀಡಿದರು.
ನಾರ್ಥ್ ಕ್ಲಸ್ಟರ್ ಇಸಿಓ ರವರಾದ ಸೈಯದ್ ಜಾಫರ್ ಮಾತನಾಡಿ ಪಠ್ಯಪುಸ್ತಕ ಮತ್ತು ಮಕ್ಕಳ ರಕ್ಷಣಾ ನೀತಿ ಬಗ್ಗೆ ಮಾಹಿತಿ ನೀಡಿದರು. ಇಸಿಓ ಶಿವಾನಂದ ಶಾಲಾ ಆಸ್ತಿ ನೋಂದಣಿ ಮತ್ತು ಶಿಥಿಲಗೊಂಡ ಕಟ್ಟಡ ನೆಲಸಮಗೊಳಿಸುವ ಬಗ್ಗೆ ಮಾಹಿತಿ ನೀಡಿದರು. ಇಸಿಓ ಮಲ್ಲಿಕಾರ್ಜುನ್ ಕರ್ತವ್ಯ ಆಪ್ ನಲ್ಲಿ ಶಿಕ್ಷಕರ ಹಾಜರಾತಿ ಇಂದೀಕರಿಸುವ ಬಗ್ಗೆ ಮಾಹಿತಿ ನೀಡಿದರು. ಬಿ ಆರ್ ಪಿ ಗಳಾದ ನಾಗರಾಜ್ ಸೇತುಬಂಧ ಎಸ್.ಇ.ಪಿ.ಎಂ.ಐ.ಝಡ್ ಶಾಲಾ ಶೈಕ್ಷಣಿಕ ಯೋಜನೆ ಕುರಿತಂತೆ ಮಾಹಿತಿ ನೀಡಿದರು.
ಬಿ.ಆರ್.ಪಿ ಪ್ರಸನ್ನ ಕುಮಾರ್ ಸ್ಯಾಟ್ಸ್ ಮತ್ತು ಯು ಡೈಸ್ ಪ್ಲಸ್ ನಲ್ಲಿ ವಿದ್ಯಾರ್ಥಿಗಳ, ಶಿಕ್ಷಕರ ಮತ್ತು ಶಾಲೆಯ ಮಾಹಿತಿಯನ್ನು ನಿಖರವಾಗಿ ಇಂದೀಕರಿಸುವ ಬಗ್ಗೆ ಮಾಹಿತಿ ನೀಡಿದರು. ಬಿ.ಆರ್.ಪಿ ಶ್ರೀನಿವಾಸ್ ಪೂರ್ವ ಪ್ರಾಥಮಿಕ ತರಗತಿ, ಇಕೋ ಕ್ಲಬ್ ಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಬಿ.ಆರ್.ಪಿ ಕರಿಯಪ್ಪ ಸಿ. ದ್ವಿಭಾಷಾ ಶಾಲೆಗಳು, ಓದು ಕರ್ನಾಟಕ, ಗಣಿತ ಗಣಕ, ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಇಸಿಓ ನಾಗರಾಜ್ ಮಧ್ಯಾಹ್ನ ಬಿಸಿಯೂಟ ಕಾರ್ಯಕ್ರಮದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಸುನಂಧಮ್ಮ ಮಾತನಾಡಿದರು. ಈ ಸಭೆಯಲ್ಲಿ ಕಾರ್ಯದರ್ಶಿ ಕೋಟಿಲಿಂಗಯ್ಯ, ಉಪಾಧ್ಯಕ್ಷರುಗಳಾದ ನಾಗೇಶ್, ದೇವರತ್ನಮ್ಮ, ಖಜಾಂಚಿ ದಿವ್ಯನಾಥ್, ಸಂಘಟನಾ ಕಾರ್ಯದರ್ಶಿಗಳಾದ ದಾದಾಪೀರ್, ಜಿ.ಎಸ್.ನವೀನಾ, ಸಹಕಾರ್ಯದರ್ಶಿಗಳಾದ ಮಂಜುನಾಥ್, ಹಸಿನಾ, ಜಿಲ್ಲಾ ಸಂಘದ ಸಹಕಾರ್ಯದರ್ಶಿ ಹನುಮಂತರೆಡ್ಡಿ, ಖಜಾಂಚಿ ಶಿವಮೂರ್ತಿ, ಸೌತ್ ಕ್ಲಸ್ಟರ್ ಸಿ.ಆರ್.ಪಿ. ಚರಣ್ ರಾಜ್, ಶಿಕ್ಷಕ ಪ್ರತಿನಿಧಿಗಳಾದ ರಮೇಶ್ ನಾಯಕ್, ರಾಜಪ್ಪ, ಸುದರ್ಶನ್, ಎಲ್ಲಾ ಸಿ.ಆರ್.ಪಿಗಳು, ತಾಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ಹಾಜರಿದ್ದರು.
