
ಹಿರಿಯೂರು :
ಹಿರಿಯೂರು ರೆಡ್ ಕ್ರಾಸ್ ಸಂಸ್ಥೆಯು ರಾಜ್ಯದಲ್ಲಿ ಹೆಸರುವಾಸಿಯಾದ ಸಂಸ್ಥೆಯಾಗಿದ್ದು, ಸತತವಾಗಿ 11 ಬಾರಿ ರಾಜ್ಯಪಾಲರಿಂದ ರಾಜ್ಯಪ್ರಶಸ್ತಿಯನ್ನು ಪಡೆದುಕೊಂಡ ಸಂಸ್ಥೆಯಾಗಿದೆ, ಜಗತ್ತನ್ನು ಕಾಡುತ್ತಿರುವ ಮಾರಕ ರೋಗವಾದ ಕ್ಯಾನ್ಸರ್ ಬಗ್ಗೆ ಜಾಗೃತಿ ಶಿಬಿರವನ್ನು ಆರಂಭಿಸಲಾಗಿದ್ದು, ಇನ್ನು ಮುಂದೆಯೂ ಹೆಚ್ಚು ಹೆಚ್ಚು ಕ್ಯಾನ್ಸರ್ ತಪಾಸಣಾ ಶಿಬಿರಗಳನ್ನು ನಡೆಸುವ ಮೂಲಕ ಸಾರ್ವಜನಿಕರಿಗೆ ನೆರವಾಗಬೇಕು ಎಂಬುದಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಪತಿಗಳಾದ ಶ್ರೀಮತಿ ಗಾಯಿತ್ರಿಶಿವರಾಂ ಹೇಳಿದರು.
ನಗರದ ರೋಟರಿ ಸಭಾಭವನದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ, ನಂತರ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ಅತ್ಯುತ್ತಮ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಜನಸೇವೆ ಮಾಡುತ್ತಿರುವ ಹಿರಿಯೂರು ರೆಡ್ ಕ್ರಾಸ್ ಸಂಸ್ಥೆಯು ವಾರದ 6 ದಿನಗಳು ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಹಾಗೂ ಅವರ ಸಹಾಯಕರಿಗೆ ಉಚಿತ ಆಹಾರ ನೀಡುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದ್ದು, ಪ್ರತಿಕೆಲಸದಲ್ಲಿಯೂ ಪಾರದರ್ಶಕತೆಯನ್ನು ಉಳಿಸಿಕೊಂಡಿರುವ “ರೆಡ್ ಕ್ರಾಸ್” ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂಬುದಾಗಿ ಹೇಳಿದರು.

ನಗರಸಭೆ ಮಾಜಿ ಸದಸ್ಯರು ಹಾಗೂ ಅನ್ನದಾಸೋಹದ ದಾನಿಗಳಾದ ಪ್ರೇಮ್ ಕುಮಾರ್ ಮಾತನಾಡಿ, ಸಮಾಜದ ಜನರು ಅನವಶ್ಯಕ ಖರ್ಚುಗಳನ್ನು ಕಡಿಮೆ ಮಾಡಿ, ತಮ್ಮ ಆದಾಯದಲ್ಲಿ ಸ್ವಲ್ಪ ಹಣವನ್ನಾದರೂ ಸಮಾಜಸೇವೆಗಾಗಿ ಬಳಸುವಂತ ಹೃದಯಶ್ರೀಮಂತಿಕೆ ಬೆಳೆಸಿಕೊಳ್ಳುವ ಮೂಲಕ ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜದ ಶ್ರೇಯೋಭಿವೃದ್ಧಿಗಾಗಿ ಸದಾ ಶ್ರಮಿಸುವ ರೆಡ್ ಕ್ರಾಸ್ ಸಂಸ್ಥೆಯಂತ ಸಂಸ್ಥೆಗಳೊಂದಿಗೆ ಕೈಜೋಡಿಸಬೇಕು ಎಂಬುದಾಗಿ ಹೇಳಿದರು.
ಅನ್ನದಾಸೋಹದ ದಾನಿಗಳಾದ ರೊಟೇರಿಯನ್ ಎಸ್.ಎಲ್.ಎನ್.ವೆಂಕಟೇಶ್ ಮಾತನಾಡಿ, ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಮೊದಲು ವಾರದ 2 ದಿನಗಳು ಉಚಿತ ಆಹಾರ ವಿತರಣೆ ಪ್ರಾರಂಭಿಸಲಾಯಿತು, ಇದೀಗ ದಾನಿಗಳ ಸಹಕಾರ ಹೆಚ್ಚಾದಂತೆ ವಾರದ ಆರು ದಿನಗಳು ಊಟದ ವ್ಯವಸ್ಥೆ ಮಾಡಲಾಗಿದ್ದು, ಇದರಿಂದ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಹಾಯವಾಗಿದ್ದು, ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂಬುದಾಗಿ ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೆಡ್ ಕ್ರಾಸ್ ಸಂಸ್ಥೆ ಛೇರ್ಮನ್ ಹೆಚ್.ಎಸ್.ಸುಂದರ್ ರಾಜ್ ಮಾತನಾಡಿ, ಹಿರಿಯೂರು ರೆಡ್ ಕ್ರಾಸ್ ಸಂಸ್ಥೆ ಸತತ 11 ವರ್ಷಗಳಿಂದ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆದು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ರೆಡ್ ಕ್ರಾಸ್ ಸಂಸ್ಥೆ ನಿರ್ದೇಶಕರ ಹಾಗೂ ಸದಸ್ಯರ ಬೆಂಬಲ ಹಾಗೂ ದಾನಿಗಳ ಸಹಕಾರ ಕಾರಣವಾಗಿದ್ದು, ರೆಡ್ ಕ್ರಾಸ್ ಸಂಸ್ಥೆ ಪರವಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂಬುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿಗಳಾದ ಎಂ.ಎಸ್.ರಾಘವೇಂದ್ರರವರು ರೆಡ್ ಕ್ರಾಸ್ ಸಂಸ್ಥೆಯ ವಾರ್ಷಿಕ ವರದಿಯನ್ನು ಓದಿದರು. ಖಜಾಂಚಿ ಸಣ್ಣಭೀಮಣ್ಣನವರು ವಾರ್ಷಿಕ ಮಹಾಸಭೆಯ ಲೆಕ್ಕಪತ್ರಗಳ ಮಂಡನೆ ಮಾಡಿದರು. ಶ್ರೀಮತಿ ಕೆ.ಆರ್.ಪಾರ್ವತಮ್ಮರವರು ರೆಡ್ ಕ್ರಾಸ್ ಸಂಸ್ಥೆ ಸ್ಥಾಪನೆ ಹಾಗೂ ಉದ್ದೇಶಗಳ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಶಿವರಾಂ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಪತಿಗಳಾದ ಶ್ರೀಮತಿ ಗಾಯಿತ್ರಿ ಶಿವರಾಂರವರ 43 ನೇ ವಿವಾಹ ವಾರ್ಷಿಕೋತ್ಸವವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಶಿವರಾಂ ದಂಪತಿಗಳು ತಮ್ಮ ವಿವಾಹವಾರ್ಷಿಕೋತ್ಸವದ ಅಂಗವಾಗಿ 5 ಸಾವಿರದ ಒಂದು ರೂಪಾಯಿಗಳನ್ನು ರೆಡ್ ಕ್ರಾಸ್ ಸಂಸ್ಥೆಗೆ ದೇಣಿಗೆ ನೀಡಿದರು. ಇದೇ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆ ಕಾರ್ಯಕ್ರಮಗಳಿಗೆ ಉಚಿತ ಹ್ಯಾಂಡ್ ಬಿಲ್ ವಿತರಣೆ ಮಾಡಿದ ಜನೌಷಧಿ ಕೇಂದ್ರದ ಮಾಲೀಕರಾದ ರವಿಕುಮಾರ್ ರವರನ್ನು ಅಭಿನಂದಿಸಲಾಯಿತು.

ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ವಾರದ 6 ದಿನಗಳ ಅನ್ನದಾಸೋಹ ದಾನಿಗಳಾದ ಪ್ರೇಮ್ ಕುಮಾರ್, ಎಸ್.ಎಲ್.ಎನ್.ವೆಂಕಟೇಶ್, ಕೆ.ಸಿ.ಪ್ರವೀಣ್, ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಬಿಜೆಪಿ ಮುಖಂಡರಾದ ಎನ್.ಆರ್.ಲಕ್ಷ್ಮೀಕಾಂತ್ ರವರು ಸಹ ಅನ್ನದಾಸೋಹ ದಾನಿಗಳಾಗಿದ್ದು, ಕಾರಣಾಂತರಗಳಿಂದ ಅವರು ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದಾರೆ ಎಂಬುದಾಗಿ ರೆಡ್ ಕ್ರಾಸ್ ಛೇರ್ಮನ್ ಹೆಚ್.ಎಸ್.ಸುಂದರ್ ರಾಜ್ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಪತಿ ಗಾಯಿತ್ರಿ ಶಿವರಾಂ, ಅವರ ಪತಿ ಶ್ರೀಯುತ ಶಿವರಾಂಚಿತ್ರದುರ್ಗ, ರೆಡ್ ಕ್ರಾಸ್ ಛೇರ್ಮನ್ ಹೆಚ್.ಎಸ್.ಸುಂದರ್ ರಾಜ್, ವೈಸ್ ಛೇರ್ಮನ್ ಬಿ.ಕೆ.ನಾಗಣ್ಣ, ಉಪಾಧ್ಯಕ್ಷರಾದ ಎ.ರಾಘವೇಂದ್ರ, ಕಾರ್ಯದರ್ಶಿ ಎಂ.ಎಸ್.ರಾಘವೇಂದ್ರ, ಖಜಾಂಚಿ ಸಣ್ಣಭೀಮಣ್ಣ, ದೇವರಾಜಮೂರ್ತಿ, ಕೆ.ಸಿ.ಪ್ರವೀಣ್, ಪ್ರೇಮ್ ಕುಮಾರ್, ಹೆಚ್.ವೆಂಕಟೇಶ್, ಡಾ.ಡಿ.ಧರಣೇಂದ್ರಯ್ಯ, ಪಿ.ಆರ್.ಸತೀಶ್ ಬಾಬು, ಆಲೂರು ಸಿದ್ಧರಾಮಣ್ಣ, ಮಹಾಬಲೇಶ್ವರಶೆಟ್ರು, ಸಂಗೀತವಿದ್ವಾನ್ ತಿಪ್ಪೇಸ್ವಾಮಿ, ಗೌರಮ್ಮ ಸುಂದರರಾಜ್, ಗೀತಾರಾಧಾಕೃಷ್ಣ, ಕೆ.ಆರ್.ಪಾರ್ವತಮ್ಮ, ನಾಗಸುಂದರಮ್ಮ, ಸರಸ್ವತಿನಾಗರಾಜ್, ವೀಣಾಉಮಾಶಂಕರ್, ಸೇರಿದಂತೆ ರೆಡ್ ಕ್ರಾಸ್ ಸಂಸ್ಥೆ ಸದಸ್ಯರುಗಳು ಉಪಸ್ಥಿತರಿದ್ದರು.
ಆರಂಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಕೆ.ಆರ್.ಪಾರ್ವತಮ್ಮ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು. ಎಸ್.ಜೋಗಪ್ಪ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಉಪಾಧ್ಯಕ್ಷರಾದ ಎ.ರಾಘವೇಂದ್ರ ವಂದಿಸಿದರು.
