
ಹಿರಿಯೂರು :
ನಗರದ ವೇದಾವತಿ ಬಡಾವಣೆ 3 ನೇ ವಾರ್ಡ್, ಚಂದ್ರಾ ಲೇ ಔಟ್, ಡಾಗ್ ಸರ್ಕಲ್ ಗೆ ಸಂಪರ್ಕ ಕಲ್ಪಿಸುವ ರಸ್ತೆ ಒತ್ತುವರಿ ತೆರವು ಮಾಡಿಸಿಕೊಡಲು ಕೋರಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಕೇಸು ನಂಬರ್ :1779/10/7/2025 ರಂತೆ ದೂರು ದಾಖಲಿಸಿ ಒಂದು ವರ್ಷಗಳ ಕಾಲ ಹೋರಾಟ ಮಾಡುತ್ತ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದಾಗಿ ನಾಗರೀಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್.ವಿ.ರಂಗನಾಥ್ ತಿಳಿಸಿದ್ದಾರೆ.
ಈ ಭಾಗದ ಕಾನೂನು ಬದ್ದ ಬಡಾವಣೆ ರಸ್ತೆ 40 ಅಡಿ ಇದ್ದಾಗ್ಯೂ ಅಕ್ಕ ಪಕ್ಕದವರು ಒತ್ತುವರಿ ಮಾಡಿ ಕೇವಲ 10 ಅಡಿ ಮಾತ್ರ ರಸ್ತೆ ಉಳಿದಿದೆ,ಈ ಸಂಬಂಧ ಜಿಲ್ಲಾಧಿಕಾರಿಗಳ ಆದೇಶ, ಜಿಲ್ಲಾ ಉಸ್ತುವಾರಿ ಸಚಿವರ ಪತ್ರ, ಲೋಕೋಪಯೋಗಿ ಸಚಿವರ ಪತ್ರ, ಮುಖ್ಯಮಂತ್ರಿಗಳ ಪತ್ರ ಕೊಟ್ಟರು ನಗರಸಭೆ ಅಧಿಕಾರಿಗಳು ರಸ್ತೆ ಒತ್ತುವರಿ ತೆರವು ಮಾಡಲಿಲ್ಲ.
ಈ ಕಾರಣ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ದೂರು ದಾಖಲಿಸಿ ಹೋರಾಟ ಮಾಡಿದ ಫಲಶ್ರುತಿಯಾಗಿ ಇದೇ ಮೇ 11 ರಂದು ಮಾನವ ಹಕ್ಕುಗಳ ಆಯೋಗ ಚಿತ್ರದುರ್ಗ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿ ಡಾಗ್ ಸರ್ಕಲ್ ರಸ್ತೆ ಒತ್ತುವರಿ ತೆರವು ಮಾಡಿಸಿ ರಸ್ತೆ ಅಭಿವೃದ್ಧಿಪಡಿಸಿಕೊಡಬೇಕೆಂದು ಆದೇಶ ಮಾಡಿ ದೂರನ್ನು ಮುಕ್ತಾಯ ಮಾಡಿದೆ.
ಆದ್ದರಿಂದ ಈಗಲಾದರೂ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ವೇದಾವತಿ ಬಡಾವಣೆ 3 ನೇ ವಾರ್ಡ್, ಚಂದ್ರಾ ಲೇ ಔಟ್, ಡಾಗ್ ಸರ್ಕಲ್ ರಸ್ತೆ ಒತ್ತುವರಿ ತೆರವು ಮಾಡಿಸಿ, ನಾಗರೀಕರ ಹಾಗೂ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ನಾಗರೀಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್.ವಿ.ರಂಗನಾಥ್ ಮನವಿ ಮಾಡಿದ್ದಾರೆ.
