
ಹಿರಿಯೂರು :
ನಗರದ ಸರ್ವಾಂಗೀಣ ಅಭಿವೃದ್ಧಿಯಾಗಬೇಕಾದರೆ ಇದಕ್ಕೆ ಪೂರಕವಾಗಿ ನಗರದ ಸಂಘ ಸಂಸ್ಥೆಗಳು, ವರ್ತಕರು, ಉದ್ಯಮದಾರರು, ಸಾರ್ವಜನಿಕರು ತಮ್ಮ ಬಾಕಿ ಇರುವ ಕಂದಾಯವನ್ನು ಕೂಡಲೇ ಪಾವತಿಸಬೇಕು ಎಂಬುದಾಗಿ ಹಿರಿಯೂರು ನಗರಸಭೆ ಪೌರಾಯುಕ್ತರಾದ ಎ.ವಾಸೀಂ ಅವರು ಮನವಿ ಮಾಡಿದ್ದಾರೆ.
ನಗರದ ಕಂದಾಯವಸೂಲಾತಿ ಕುರಿತು ಮಾತನಾಡಿದ ಅವರು ನಗರ ಶಿಕ್ಷಕರ ಭವನದಿಂದ 2025 -26 ಮತ್ತು 2026-27ನೇ ಸಾಲಿನಲ್ಲಿ ಒಟ್ಟು 18,55,189 ಲಕ್ಷ ರೂ ಕಂದಾಯ ಬಾಕಿ ಇದೆ. ನಗರಸಭೆ ವತಿಯಿಂದ ಶಿಕ್ಷಕರ ಭವನದ ಪದಾಧಿಕಾರಿಗಳಿಗೆ, ಸಾರ್ವಜನಿಕರಿಗೆ ಕಂದಾಯ ಪಾವತಿಸುವಂತೆ ಈಗಾಗಲೇ ಸಾಕಷ್ಟು ಬಾರಿ ತಿಳುವಳಿಕೆ ನೀಡಲಾಗಿದೆ.
ಆದರೂ ಸಹ ನಗರದ ನಾಗರೀಕರು, ಸಂಘ ಸಂಸ್ಥೆಗಳು, ವರ್ತಕರು, ಉದ್ಯಮದಾರರು, ಇನ್ನೂ ಕೂಡ ತೆರಿಗೆಯನ್ನು ಪಾವತಿಸದೆ ಬಾಕಿ ಉಳಿಸಿಕೊಂಡಿದ್ದಾರೆ, ನಿಗದಿತ ಸಮಯದಲ್ಲಿ ಕಂದಾಯ ಪಾವತಿಸುವುದು ಕೇವಲ ನಿಯಮವಲ್ಲ ಅದು ನಗರದ ನಾಗರೀಕರ ಜವಾಬ್ದಾರಿಯೂ ಸಹ ಆಗಿದೆ ಎಂಬುದಾಗಿ ತಿಳಿಸಿದರು.
ಸಾರ್ವಜನಿಕರು ಸರಿಯಾದ ಸಮಯಕ್ಕೆ ತೆರಿಗೆ ಪಾವತಿಸುವುದರಿಂದ ಅಭಿವೃದ್ಧಿ ಕೆಲಸಗಳ ವೇಗ ಹೆಚ್ಚಾಗಲಿದ್ದು, ಸಾರ್ವಜನಿಕರು ಪಾವತಿಸುವ ತೆರಿಗೆ ಹಣದಿಂದಲೇ ನಗರದ ರಸ್ತೆ, ಚರಂಡಿ, ಬೀದಿ ದೀಪ ಹಾಗೂ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಸಲು ನೀವು ಸರಿಯಾದ ಸಮಯಕ್ಕೆ ತೆರಿಗೆ ಪಾವತಿಸಬೇಕು.
ದಂಡದ ಹೊರೆ ತಪ್ಪಿಸಿ ಸಕಾಲಕ್ಕೆ ತೆರಿಗೆ ಪಾವತಿಸುವುದರಿಂದ ಅನಗತ್ಯ ಬಡ್ಡಿ ಹಾಗೂ ದಂಡದ ಮೊತ್ತವನ್ನು ಉಳಿಸಬಹುದು ಇದು ಸಾರ್ವಜನಿಕರಿಗೆ ಆರ್ಥಿಕವಾಗಿ ಅನುಕೂಲವಾಗಲಿದೆ. ಉತ್ತಮ ನಾಗರಿಕ ಸೌಲಭ್ಯ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಜಾರಿಗೆ ತರಲು ನಗರಸಭೆಗೆ ಆರ್ಥಿಕ ಶಕ್ತಿ ತುಂಬಿದಂಥ ಆಗುತ್ತದೆ.
ನಗರದ ನಾಗರೀಕರು ತೆರಿಗೆ ಬಾಕಿ ಉಳಿಸಿಕೊಳ್ಳದೆ ಪಾವತಿಸಿದರೆ ಅದು ಅವರಿಗೆ ಹೆಚ್ಚಿನ ಅನುಕೂಲ ತಂದು ಕೊಡಲಿದೆ, ಆದ್ದರಿಂದ ನಗರದ ನಾಗರೀಕರು ನಗರಸಭೆಯೊಂದಿಗೆ ಸಹಕರಿಸುವ ಮೂಲಕ ನಗರದ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕು ಎಂಬುದಾಗಿ ಈ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.
