
ಹಿರಿಯೂರು :
ತಾಲ್ಲೂಕಿನ ಸೂರಗೊಂಡನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತವಂದಿ ಗ್ರಾಮದ ಜನರು ಮಂಗಳವಾರ ಕುಡಿಯುವ ನೀರಿಗೆ ಆಗ್ರಹಿಸಿ, ಗ್ರಾಮ ಪಂಚಾಯ್ತಿ ಮತ್ತು ನಗರದ ತಾಲ್ಲೂಕು ಪಂಚಾಯ್ತಿ ಮುಂಭಾಗ ಪ್ರತಿಭಟನೆ ನಡೆಸಿದರು.
ಗ್ರಾಮದ ನೂರಾರು ಮಹಿಳೆಯರು ಗ್ರಾಮ ಪಂಚಾಯ್ತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿ, ನಂತರ ತಾಲ್ಲೂಕು ಪಂಚಾಯ್ತಿ ಕಚೇರಿ ಬಳಿ ಬಂದು ಪ್ರತಿಭಟಿಸಿ, ನೀರಿನ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದರು.
ಸೂರಗೊಂಡನಹಳ್ಳಿ ಗ್ರಾಮ ಪಂಚಾಯ್ತಿಗೆ ಸೇರಿದ ತವಂದಿ ಗ್ರಾಮದಲ್ಲಿ ಸುಮಾರು 300 ಕುಟುಂಬಗಳು ವಾಸವಾಗಿದ್ದು, ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ತೀವ್ರವಾಗುತ್ತಿದೆ, ಸುಮಾರು 2-3 ತಿಂಗಳುಗಳಿಂದ ನೀರಿನ ಕೊರತೆ ಕಾಡುತ್ತಿದ್ದು, ಸಂಬಂಧಪಟ್ಟ ಸೂರಗೊಂಡನಹಳ್ಳಿ ಗ್ರಾಮ ಪಂಚಾಯ್ತಿ ಪಿಡಿಓ ಹಾಗೂ ಕಾರ್ಯದರ್ಶಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಕುಡಿಯುವ ನೀರಿನ ಬಗ್ಗೆ ಕೇಳಲು ಹೋದರೂ ಸಹ ಪಂಚಾಯ್ತಿಗೆ ಬರಬೇಡಿ, ಪಂಚಾಯ್ತಿ ಕಚೇರಿಯಿಂದ ಹೊರಗೆ ಹೋಗಿ ಎಂದು ದೌರ್ಜನ್ಯದ ಮಾತನಾಡುತ್ತಾರೆ. ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಕ್ಕೂ ಸಹ ನೀರು ಬರದೇ ನಿಂತು ಹೋಗಿದ್ದು, ಗ್ರಾಮದ ಸಾವಿರಾರು ಜನರು ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿದ್ದಾರೆ.ಆದ್ದರಿಂದ ಈಗಲಾದರೂ ಗ್ರಾಮದ ನೀರಿನ ಸಮಸ್ಯೆಯನ್ನು ಪರಿಹರಿಸಬೇಕು ಎಂಬುದಾಗಿ ಗ್ರಾಮಸ್ಥರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ತಿಪ್ಪೇಸ್ವಾಮಿ, ಕೊಟ್ರಣ್ಣ, ದೇವಣ್ಣ, ಗಂಗಾಧರ್, ಈಶಣ್ಣ, ಕೋಟಿ, ಗುರುಸಿದ್ಧಮ್ಮ, ಲಲಿತಮ್ಮ, ಗೀತಮ್ಮ, ಲಕ್ಷ್ಮಕ್ಕ, ಸಾಕಮ್ಮ, ಪಾರ್ವತಮ್ಮ, ಸುಶೀಲಮ್ಮ, ವಿಶಾಲಾಕ್ಷಮ್ಮ, ಗಿರಿಜಮ್ಮ, ತಾಯಮ್ಮ, ತಿಪ್ಪೀರಮ್ಮ, ನರಸಿಂಹಮೂರ್ತಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
