May 31, 2026
000001

ಚಳ್ಳಕೆರೆ :

ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಭಾನುವಾರ ಬೆಳಗಿನ ಜಾವ ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯನ್ನು ಚಳ್ಳಕೆರೆ ನಗರದ ಪಾವಗಡ ರಸ್ತೆಯ ಜೈನಧಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಜೈನಸಂಪ್ರದಾಯದ ವಿಧಿ-ವಿಧಾನಗಳೊಂದಿಗೆ ಸೋಮವಾರ ಸಂಜೆ ನೆರವೇರಿತು.

ಸಹಸ್ರಾರು ಜನರ ಅಶ್ರುತರ್ಪಣದ ನಡುವೆ ಸಂಜೆ 4 ಗಂಟೆಗೆ ಪುತ್ರ ಸುಹಾಸ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಸಚಿವ ಸುಧಾಕರ್ ರವರು ಪಂಚಭೂತಗಳಲ್ಲಿ ಲೀನವಾದರು. ಈ ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಸೇರಿ ಹಲವು ಸಚಿವರು, ಶಾಸಕರು ಭಾಗಿಯಾಗಿದ್ದರು.

ಮೃತರ ಗೌರವಾರ್ಥ ಪೋಲೀಸರು 3 ಸುತ್ತು ಕುಶಾಲತೋಪು ಸಿಡಿಸಿದರು. ರಾಷ್ಟ್ರಗೀತೆ ಹಾಡಿ, ಮೌನಾಚರಣೆ ಬಳಿಕ ಸಿದ್ಧರಾಮಯ್ಯ ಅವರು ರಾಷ್ಟ್ರಧ್ವಜವನ್ನು ಸುಧಾಕರ್ ಅವರ ಪತ್ನಿ ಹರ್ಷಿಣಿ ಅವರಿಗೆ ಹಸ್ತಾಂತರಿಸಿದರು. ಪುತ್ರಿ ಸ್ಪೂರ್ತಿ ಸೇರಿ ಕುಟುಂಬಸ್ಥರಿದ್ದರು. ಜೈನಮುನಿಗಳು, ಮಾದಾರಚೆನ್ನಯ್ಯ ಸ್ವಾಮೀಜಿ, ಷಡಕ್ಷರಮುನಿ ದೇಶೀಕೇಂದ್ರ ಸ್ವಾಮೀಜಿ, ಬಸವಲಿಂಗಸ್ವಾಮೀಜಿ ಸೇರಿ ವಿವಿಧ ಮಠಾಧೀಶರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

ಸಚಿವರಾದ ಜಿ.ಪರಮೇಶ್ವರ್, ಎಚ್.ಕೆ.ಪಾಟೀಲ್,ಸತೀಶ್ ಜಾರಕಿಹೊಳೆ, ಕೆ.ಎಚ್.ಮುನಿಯಪ್ಪ, ಕೆ.ಜಿ.ಜಾರ್ಜ್, ಈಶ್ವರಖಂಡ್ರೆ, ಶರಣ ಪ್ರಕಾಶ್ ಪಾಟೀಲ್, ಎಂ.ಸಿ.ಸುಧಾಕರ್, ಲಕ್ಷ್ಮೀಹೆಬ್ಬಾಳ್ಕರ್, ಭೈರತಿ ಸುರೇಶ್, ಎಂ.ಬಿ.ಪಾಟೀಲ್, ಟಿ.ರಘುಮೂರ್ತಿ, ಕೆ.ಸಿ.ವೀರೇಂದ್ರಪಪ್ಪಿ, ಎನ್.ವೈ.ಗೋಪಾಲಕೃಷ್ಣ, ಬಿ.ಜಿ.ಗೋವಿಂದಪ್ಪ, ಟಿ.ಬಿ.ಜಯಚಂದ್ರ, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ,  ಹಾಲಿ ಮಾಜಿ ಶಾಸಕರು, ಸಂಸದರು, ಜನಪ್ರತಿನಿಧಿಗಳು, ಗಣ್ಯರು ಪಾಲ್ಗೊಂಡಿದ್ದರು.

ಅಂತ್ಯಕ್ರಿಯೆಗೆ ಮುನ್ನ ಡಿ.ಸುಧಾಕರ್ ರವರ ಪಾರ್ಥೀವ ಶರೀರವನ್ನು ಚಳ್ಳಕೆರೆಯ ಡಿ.ಸುಧಾಕರ್ ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು, ಈ ಸಂದರ್ಭದಲ್ಲಿ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು, ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ಅಂತಿಮ ನಮನ ಸಲ್ಲಿಸಿದರು.

ಸಚಿವ ಡಿ.ಸುಧಾಕರ್ ರವರ ಪಾರ್ಥೀವ ಶರೀರವನ್ನು ಭಾನುವಾರ ರಾತ್ರಿ ಹಿರಿಯೂರಿನಿಂದ ಚಳ್ಳಕೆರೆಯ ನಿವಾಸಕ್ಕೆ ತರಲಾಯಿತು. ರಾತ್ರಿಯಿಂದಲೇ ಜನರು ಆಗಮಿಸಿ, ದರ್ಶನ ಪಡೆದರು. ಸೋಮವಾರ ಬೆಳಗ್ಗೆ ನೆಹರು, ಅಂಬೇಡ್ಕರ್,ವಾಲ್ಮೀಕಿ ವೃತ್ತದ ಮಾರ್ಗವಾಗಿ ಮೆರವಣಿಗೆ ಮೂಲಕ ಡಿ.ಸುಧಾಕರ್ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3ರವರೆಗೂ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

About The Author

Leave a Reply

Your email address will not be published. Required fields are marked *