
ಹಿರಿಯೂರು :
ತಾಲೂಕಿನಲ್ಲಿ ಮಳೆ ಇಲ್ಲದೆ ಅತಿಯಾದ ಬಿಸಿಲಿನಿಂದ ಬೆಳೆದು ನಿಂತಿರುವ ಅಡಿಕೆ ತೆಂಗು ಬಾಳೆ ತರಕಾರಿ ಹಣ್ಣು ಹೂವು ಇತ್ಯಾದಿ ಬೆಳೆಗಳು ಒಣಗುತ್ತಿದ್ದು, ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದೆ, ಅಲ್ಲದೆ ಕಟ್ಟೆಗಳು-ಹಳ್ಳಗಳು ಒಣಗಿವೆ, ಆದ್ದರಿಂದ ಅತಿ ತುರ್ತಾಗಿ ವಿವಿಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಬೇಕೆಂದು ವಿ ವಿ ಸಾಗರ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾದ ಕಸವನಹಳ್ಳಿರಮೇಶ್ ಹೇಳಿದರು.
ನಗರದ ವಿಶ್ವೇಶ್ವರಯ್ಯ ಜಲನಿಗಮದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಆವರಣದಲ್ಲಿ ವಿ ವಿ ಸಾಗರ ನೀರಾವರಿ ಹೋರಾಟ ಸಮಿತಿ ವತಿಯಿಂದ ವಿವಿಸಾಗರ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಕ್ಕೆ ಎಡ ಮತ್ತು ಬಲ ಕಾಲುವೆಗಳಿಂದ ನೀರು ಹರಿಸುವಂತೆ ಒತ್ತಾಯಿಸಿ, ಚಿತ್ರದುರ್ಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ವಿವಿ ಸಾಗರ ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ ಸಹ ಅಚ್ಚುಕಟ್ಟು ಪ್ರದೇಶಕ್ಕೆ ಬಳಕೆ ಮಾಡಿಕೊಳ್ಳಲಾರದ ಅಸಹಾಯಕ ಪರಿಸ್ಥಿತಿಯಲ್ಲಿ ನಾವಿದ್ದು,. ನಮ್ಮ ಗೌರವಾನ್ವಿತ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸುಧಾಕರ್ ಅವರು ಅನಾರೋಗ್ಯ ಕಾರಣದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಬೇಗ ಗುಣಮುಖರಾಗಿ ಬರಲಿ. ಅವರಿಲ್ಲದೆ ಇರುವುದರಿಂದ ತಮ್ಮಲ್ಲಿ ನಾವು ಮನವಿ ಮಾಡುತ್ತಿದ್ದು, ತಾವುಗಳು ಪರಿಶೀಲಿಸಿ ತುರ್ತಾಗಿ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಆದೇಶಿಸಬೇಕೆಂದು ಮನವಿ ಮಾಡಿದರು.
ನಾವು ರೈತರು ನಮ್ಮ ಹೊಲ ಗದ್ದೆ ಕೆಲಸಗಳು ಮತ್ತು ಜಾನುವಾರು ಸಾಕಾಣಿಕೆ ಇತ್ಯಾದಿಗಳ ಒತ್ತಡದಲ್ಲಿ ತಮ್ಮನ್ನು ಖುದ್ದು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ತಾವು ಇಡೀ ಜಿಲ್ಲೆಯ ಕಷ್ಟ ಸುಖಗಳನ್ನು ನೋಡಬೇಕಾಗುತ್ತದೆ ಅದೇ ರೀತಿ ಈ ಮುಖಾಂತರ ತಮ್ಮಲ್ಲಿ ಮತ್ತೊಮ್ಮೆ ಮನವಿ ಮಾಡುವುದೇನೆಂದರೆ, ತಾವುಗಳು ಯಾವುದೇ ಕಾರಣಕ್ಕೂ ವಿಳಂಬ ಮಾಡದೆ , ನೀರು ಹರಿಸಬೇಕೆಂದು ಅವರು ಒತ್ತಾಯಿಸಿದರು.
ಪ್ರತಿಯೊಂದಕ್ಕೂ ಚಳುವಳಿ ಹೋರಾಟ, ಉಪವಾಸಸತ್ಯಾಗ್ರಹ ಅನಿವಾರ್ಯವಲ್ಲ, ದಯವಿಟ್ಟು ರೈತರನ್ನು ಬೀದಿಗೆ ಬರಲು ಬಿಡಬೇಡಿ, ಈ ಕೂಡಲೇ ವಿವಿಸಾಗರ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಕ್ಕೆ ಎಡ ಮತ್ತು ಬಲ ಕಾಲುವೆಗಳಿಂದ ನೀರು ಹರಿಸುವ ರೈತರ ನೆರವಿಗೆ ಬರಬೇಕು, ಇಲ್ಲವಾದಲ್ಲಿ ಹೋರಾಟ ಅನಿವಾರ್ಯವಾಗುತ್ತದೆ ಎಂಬುದಾಗಿ ಹೇಳಿದರು.
ಈ ಸಂದರ್ಭದಲ್ಲಿ ವಿವಿಸಾಗರ ನೀರಾವರಿ ಹೋರಾಟ ಸಮಿತಿ ನಿರ್ದೇಶಕರಾದ ಮಂಜುನಾಥ್ ಮಾಳಿಗೆ, ,ಪ್ರೊ.ಮೈಸೂರ್ ಶಿವಣ್ಣ, ಪಿಟ್ಲಾಲಿ ಶ್ರೀನಿವಾಸ್ ಉಪಸ್ಥಿತರಿದ್ದರು.
