April 17, 2026
0003

ಹಿರಿಯೂರು:

ಗುಣಮಟ್ಟದ ಹಾಲು ಉತ್ಪಾದನೆ ಮಾಡುವ ಮೂಲಕ ರೈತರು ಒಕ್ಕೂಟವನ್ನು ಸುಭದ್ರಪಡಿಸಬೇಕು ಕೃಷ್ಣಾಪುರದಲ್ಲಿ ಒಟ್ಟು 70ಮನೆಗಳಿದ್ದು, ಸುಮಾರು 400 ಹಸುಗಳನ್ನು ಸಾಕಲಾಗಿದೆ.. ಎಂಬುದಾಗಿ ಶಿಮುಲ್ ನಿರ್ದೇಶಕರಾದ ಬಿ.ಸಿ.ಸಂಜೀವಮೂರ್ತಿ ಅವರು ಹೇಳಿದರು.

ತಾಲ್ಲೂಕಿನ ಧರ್ಮಪುರ ಹೋಬಳಿ ಸಮೀಪದ ಕೃಷ್ಣಾಪುರದಲ್ಲಿ ಧರ್ಮಪುರ ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಹಿರಿಯೂರು ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ  ಹಮ್ಮಿಕೊಳ್ಳಲಾಗಿದ್ದ ಮಿಶ್ರತಳಿ ಹಸು, ಕರುಗಳ ಪ್ರದರ್ಶನ ಮತ್ತು ಬರಡು ರಾಸುಗಳ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೃಷ್ಣಾಪುರ ಗ್ರಾಮದಿಂದ ಪ್ರತಿನಿತ್ಯ 3ಸಾವಿರದಿಂದ 4ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಗ್ರಾಮದಲ್ಲಿ ಹಸುಗಳನ್ನು ಉತ್ಕೃಷ್ಟವಾಗಿ ಸಾಕಲಾಗಿದೆ. ಅದಕ್ಕಾಗಿ ರೈತರು ರಾಸುಗಳ ಸಾಕಾಣಿಕೆ ತರಬೇತಿಗೆ ಧಾರವಾಡಕ್ಕೆ  ಹೋಗಬೇಕಿಲ್ಲ. ಕೃಷ್ಣಾಪುರಕ್ಕೆ ಬಂದು ನೋಡಬೇಕು ಎಂದರಲ್ಲದೆ,

ರಾಜ್ಯದಲ್ಲಿ ಒಟ್ಟು 16 ಒಕ್ಕೂಟಗಳಿದ್ದು, 2 ಬಿ.ಎಂ.ಸಿ. ಕೇಂದ್ರಗಳನ್ನು  ಹೊಂದಿರುವ ಏಕೈಕ  ಕೇಂದ್ರ  ಧರ್ಮಪುರದಲ್ಲಿ  ಪ್ರತಿನಿತ್ಯ 6ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇಲ್ಲಿ ಸುಮಾರು  82 ಮಹಿಳಾ ರೈತರಿರುವುದು  ವಿಶೇಷವಾಗಿದೆ. ಸಂಘ 2024-25 ನೇ ಸಾಲಿನಲ್ಲಿ ಹದಿನಾಲ್ಕುವರೆ ಲಕ್ಷ ನಿವ್ವಳ ಲಾಭ ಗಳಿಸಿದೆ. ಹಾಲು ಉತ್ಪಾದಕ ಸಾವನ್ನಪ್ಪಿದರೆ ಕಲ್ಯಾಣ ನಿಧಿ ಮೂಲಕ 60ಸಾವಿರ ವಿಮೆ ಹಣ ನೀಡಲಾಗುವುದು ಎಂಬುದಾಗಿ ಅವರು ಹೇಳಿದರು.

ಚಿತ್ರದುರ್ಗ ಮತ್ತು ದಾವಣಗೆರೆಗೆ ಪ್ರತ್ಯೇಕವಾಗಿ ಮೆಗಾಡೈರಿ ದಾವಣಗೆರೆಯಲ್ಲಿ ಪ್ರಾರಂಭವಾಗುತ್ತಿದ್ದು, ಹದಿನಾಲ್ಕು ಎಕರೆ  ವಿಸ್ತೀರ್ಣದಲ್ಲಿ ಸುಮಾರು 300ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಈಗಾಗಲೇ ಭೂಮಿಪೂಜೆಯಾಗಿದೆ. ಇಲ್ಲಿಂದ 27 ನಂದಿನಿ ಉತ್ಪನ್ನಗಳನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂಬುದಾಗಿ ಅವರು ಹೇಳಿದರು.

ಹೊಸದುರ್ಗ ಶಿಮುಲ್ ನಿರ್ದೇಶಕರಾದ ಬಿ.ಆರ್.ರವಿಕುಮಾರ್  ಅವರು ಮಾತನಾಡಿ  ದೇಶದಲ್ಲಿ ಹಾಲು ಉತ್ಪಾದನೆ ಒಂದು ಉದ್ಯಮವಾಗಿ  ಬೆಳೆದಿದ್ದು, ರೈತರು ಎಚ್ಚರಿಕೆಇಂದ ರಾಸುಗಳ ನಿರ್ವಹಣೆ ಮಾಡಬೇಕು. ವಿಮಾ ಕಂಪನಿಯವರು  ರೈತರ ಪರವಾಗಿ ನಿಲ್ಲಬೇಕು. ಆಕಸ್ಮಿಕವಾಗಿ ರಾಸು ಸತ್ತರೆ, ಕಡಿಮೆ ವಿಮೆಯನ್ನು ಪಾವತಿಸಬಾರದು. ರೈತರ ಬದುಕು ಕಷ್ಟಮಯವಾಗಿದೆ ಎಂಬುದಾಗಿ ಅವರು ಹೇಳಿದರು.

ಮುಖ್ಯ ಪಶು ವೈದ್ಯಾಧಿಕಾರಿಯಾದ ಡಾ. ನಾಗರಾಜ್  ಅವರು ಮಾತನಾಡಿ ಬೇಸಿಗೆ ಪ್ರಾರಂಭವಾಗಿದ್ದು ರಾಸುಗಳಿಗೆ ಕಾಲು  ಬಾಯಿ ರೋಗ ಮತ್ತು ಗಂಟು ರೋಗ ಬರಲಿವೆ. ಅದಕ್ಕಾಗಿ ರೈತರು ಮುನ್ನಚ್ಚರಿಕೆಯಾಗಿ ಲಸಿಕೆ  ಹಾಕಿಸಬೇಕು.ರೈತರು ರಾಸುಗಳ ನಿರ್ವಹಣೆಯನ್ನು ಚೆನ್ನಾಗಿ ಮಾಡಿದ್ದಲ್ಲಿ ಗುಣಮಟ್ಟದ ಮತ್ತುಅಧಿಕ ಹಾಲು ಉತ್ಪಾದನೆಯನ್ನು  ಪಡೆಯಬಹುದು. ಜೊತೆಗೆ ತಪ್ಪದೇ ಖನಿಜ ಮಿಶ್ರಣ ಆಹಾರವನ್ನು ಕೊಡಿ ಎಂಬುದಾಗಿ ಅವರು ಹೇಳಿದರು.

ಧರ್ಮಪುರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ  ಭದ್ರಾಚಲ ಅವರು  ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಧರ್ಮಪುರ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷೆಯಾದ ಶ್ರೀಮತಿ ನೂರ್ ಜಾನ್ ಅಮಾನುಲ್ಲಾ, ಈಶ್ವರಪ್ಪ, ಕೆ.ಕೃಷ್ಣಪ್ಪ, ಪುಟ್ಟರಾಜು, ಭೋಜರಾಜ, ಎಸ್.ಪಿ.ದಿನೇಶ್, ಮಹಾಲಿಂಗಪ್ಪ, ಕಿರಣ್ ಕುಮಾರ್,ಲತಾ, ಜ್ಯೋತಿ, ಕಾರ್ಯದರ್ಶಿ ಮಾರುತಿ, ಪಶುವೈದ್ಯಾಧಿಕಾರಿಗಳಾದ ಡಾ. ಗುರುಪ್ರಸಾದ್, ಡಾ. ಕಿರಣ್ ಕುಮಾರ್, ಡಾ.ಪೂಜಾಶ್ರೀ, ಡಾ.ಮೋಹನ್ ಕುಮಾರ್, ಡಾ.ಶಶಿಕುಮಾರ್, ಜುಂಜಪ್ಪ, ತಿಪ್ಪೇಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *