October 31, 2026
0005

ಹಿರಿಯೂರು :

ಸುಮಾರು ಮೂರು ವರ್ಷಕ್ಕೂ ಹೆಚ್ಚು ಕಾಲ ಹಿರಿಯೂರಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ನಾನು ಸಲ್ಲಿಸಿದ ಸೇವೆಯು ನನಗೆ ಸಂತೃಪ್ತಿಯನ್ನು ತಂದಿದೆ ಎಂಬುದಾಗಿ ನಿರ್ಗಮಿತ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ ಹೇಳಿದರು.

ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸಿಬ್ಬಂದಿಗಳಿಂದ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅಧಿಕಾರ ಇದೆ ಎಂದು ಭಾವಿಸಿ, ದರ್ಪ ಹಾಗೂ ಒತ್ತಡ ಹೇರಿ ಸಿಬ್ಬಂದಿ ಹಾಗೂ ಶಿಕ್ಷಕರುಗಳಿಂದ ಕೆಲಸ ಮಾಡಿಸದೆ ಪ್ರೀತಿ ವಿಶ್ವಾಸ ಹಾಗೂ ಸಲಹೆ ರೂಪದಲ್ಲಿ ಕೆಲಸ ತೆಗೆದರೆ ಮಾತ್ರ ಗುಣಮಟ್ಟದ ಹಾಗೂ ಕಾನೂನು ಚೌಕಟ್ಟಿನೊಳಗೆ ಕೆಲಸ ನಿರ್ವಹಿಸಲು ಸಾಧ್ಯ ಎಂಬುದಾಗಿ ಹೇಳಿದರು.

ನನ್ನ ಕರ್ತವ್ಯದ ಅವಧಿಯಲ್ಲಿ ಎಲ್ಲಾ ಸಿಬ್ಬಂದಿಗಳು, ಅಧಿಕಾರಿಗಳು ಮತ್ತು ಜನಸಾಮಾನ್ಯರ ಸಹಕಾರದಿಂದ ಕೆಲವು ಮಹತ್ತರ ಯೋಜನೆಗಳಾದ “ನಮ್ಮ ಶಾಲೆ ನಮ್ಮ ಕೊಡುಗೆ” ಶಾಲಾ ಆಸ್ತಿಗಳ ಘೋಷಣೆ ನಾನು ಯಶಸ್ಸು ಗಳಿಸಲು ಸಾಧ್ಯವಾಯಿತು ಎಂದರು.

ಇಸಿಓ ಶಿವಾನಂದ್ ಮಾತನಾಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ ಒಬ್ಬ ಜವಾಬ್ದಾರಿಯುತ ಅಧಿಕಾರಿಯಾಗಿ ಇಲಾಖೆಯ ಕೆಲಸ ಕಾರ್ಯಗಳಲ್ಲಿ ತಮ್ಮ ಅನುಭವದ ಮಾರ್ಗದರ್ಶನ ನೀಡಿದ್ದು, ನಮಗೆ ಉತ್ತಮ ಸಹಕಾರಿಯಾಯಿತು ಎಂದರಲ್ಲದೆ,

ಶಿಕ್ಷಣಾಧಿಕಾರಿಗಳಾಗಿ ಅವರಿಗಿರುವ ಶಿಕ್ಷಣ ಕ್ಷೇತ್ರದ ಅಪಾರಜ್ಞಾನವನ್ನು ನಮಗೆ ಹಂಚಿ, ಇಲಾಖೆಯ ಕೆಲಸಗಳು ಸುಗಮವಾಗಲು ಕಾರಣವಾದರು, ಸಾಹಿತಿಯಾಗಿ ಶಿಕ್ಷಣ ಕ್ಷೇತ್ರಕ್ಕೆ ಪುಸ್ತಕ ರೂಪದಲ್ಲಿ ಕೊಡುಗೆ ನೀಡಿದ್ದು ಶ್ಲಾಘನೀಯ ಎಂದರು.

ಈ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಸಿಬ್ಬಂದಿಗಳಾದ ಶಿವಪ್ರಸಾದ್, ರುಕ್ಸಾನ, ಸುವರ್ಣ, ಶಿಲ್ಪ, ಶಿವು, ನಟರಾಜ್, ರಾಜಶೇಖರ್, ಸೈಯದ್ ಜಾಫರ್, ಪುಟ್ಟಸ್ವಾಮಿ, ರಂಗಸ್ವಾಮಿ, ನಾಗರಾಜ್, ಮಲ್ಲಿಕಾರ್ಜುನ್, ಹರೀಶ್, ಕೃಷ್ಣಮೂರ್ತಿ, ಮೋಹನ್ ಇತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *