
ಹಿರಿಯೂರು:
ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯ ಭರ್ತಿಯಾದ ಹಿನ್ನಲೆಯಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಬಾಗಿನ ಅರ್ಪಿಸಿದರು.
ತರಹವೇರಿ ಪುಷ್ಪಗಳಿಂದ ಅಲಂಕಾರಗೊಂಡಿದ್ದ ವಾಣಿವಿಲಾಸ ಸಾಗರ ಜಲಾಶಯದ ಅಣೆಕಟ್ಟೆ ಮೇಲಿಂದ ಸಚಿವರಾದ ಡಿ.ಸುಧಾಕರ್ ಹಾಗೂ ಶಾಸಕರಾದ ಬಿ.ಜಿ.ಗೋವಿಂದಪ್ಪ, ಟಿ.ರಘುಮೂರ್ತಿ, ಡಾ.ಎಂ.ಚಂದ್ರಪ್ಪ ಸೇರಿದಂತೆ ವಿವಿಧ ಗಣ್ಯರು ಪುಷ್ಪಾರ್ಚನೆ ಮಾಡಿ, ಹಾಲು ತುಪ್ಪ ಸುರಿದು ಪುಷ್ಪಾರ್ಚನೆ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಮಾತನಾಡಿ ಕಳೆದ 2025ರ ಜನವರಿಯಲ್ಲಿ ವಾಣಿವಿಲಾಸ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗಿತ್ತು. ನಂತರ ಅಕ್ಟೋಬರ್ ತಿಂಗಳಿನಲ್ಲಿಯೇ ಮತ್ತೊಮ್ಮೆ ಜಲಶಯ ಭರ್ತಿಯಾಗಿತ್ತು. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಂದ ಜಲಾಶಯಕ್ಕೆ ಕಳೆದ ಡಿಸೆಂಬರ್ ಮಾಹೆಯಲ್ಲಿ ಬಾಗಿನ ಅರ್ಪಿಸುವ ಕಾರ್ಯಕ್ರಮ ಏರ್ಪಡಿಸಲು ಪ್ರಯತ್ನ ನಡೆಸಲಾಗಿತ್ತು.
ಆದರೆ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಸಮಯ ಅಭಾವದ ಕಾರಣ ಇಂದು ಜಿಲ್ಲಾಡಳಿತ ವತಿಯಿಂದ ಜಿಲ್ಲೆಯ ಶಾಸಕರು ಹಾಗೂ ಜನಪ್ರತಿನಿಧಿಗಳೊಂದಿಗೆ ಬಾಗಿನ ಅರ್ಪಿಸಲಾಗಿದೆ. ಒಂದೇ ವರ್ಷದಲ್ಲಿಯೇ ಎರಡು ಬಾರಿ ವಾಣಿವಿಲಾಸ ಸಾಗರ ಜಲಾಶಯ ಭರ್ತಿಯಾಗಿರುವುದು ಜನರಿಗೆ ಹರ್ಷ ತಂದಿದೆ. ಎಂದರಲ್ಲದೆ,
ವಾಣಿವಿಲಾಸ ಸಾಗರ ಜಲಾಶಯದ ಹಿನ್ನೀರಿನಿಂದಾಗಿ ಹೊಸದುರ್ಗ ರೈತರ ಸಮಸ್ಯೆ ಬಗೆಹರಿಸುವ ಸಂಬಂಧ ಕಳೆದ ತಿಂಗಳು ಜಿಲ್ಲೆಯ ಜಿಲ್ಲೆಯ ಶಾಸಕರು ಹಾಗೂ ಉಪಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಲಾಖಾ ಅಧಿಕಾರಿಗಳು ರೂಪುರೇಷೆ ಸಿದ್ಧಪಡಿಸಿದ್ದು, ವಾಣಿವಿಲಾಸ ಸಾಗರ ಜಲಾಶಯದ ಹಿನ್ನೀರಿನಿಂದಾಗಿ ರೈತರು ಅನುಭವಿಸುವ ತೊಂದರೆಗಳ ನಿವಾರಣೆ ಮಾಡುತ್ತೇವೆ ಎಂಬುದಾಗಿ ಅವರು ಭರವಸೆ ನೀಡಿದರು.

ಹೊಸದುರ್ಗ ಶಾಸಕರಾದ ಬಿ.ಜಿ. ಗೋವಿಂದಪ್ಪ ಅವರು ಮಾತನಾಡಿ ಹೊಸದುರ್ಗ ತಾಲ್ಲೂಕಿನ 920ರೈತರಿಗೆ ಪರಿಹಾರ ವಿತರಣೆ ಮಾಡಲು ಈಗಾಗಲೇ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಕೆರೆ, ರಸ್ತೆ, ಸೇತುವೆ ರಿಪೇರಿಗೂ ಕ್ರಮ ಕೈಗೊಳ್ಳಲಾಗಿದೆ ಎಂಬುದಾಗಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಶಾಸಕರಾದ ಬಿ.ಜಿ.ಗೋವಿಂದಪ್ಪ, ಡಾ.ಎಂ.ಚಂದ್ರಪ್ಪ, ಟಿ.ರಘುಮೂರ್ತಿ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಪಿ.ರಘು, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಸಣ್ಣಚಿತ್ತಯ್ಯ, ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ಎಫ್.ಹೆಚ್.ಲಮಾಣಿ, ಅಧೀಕ್ಷಕ ಎಂಜಿನಿಯರ್ ಕೆ.ಟಿ.ಹರೀಶ್, ಕಾರ್ಯಪಾಲಕ ಎಂಜಿನಿಯರ್ ಚಂದ್ರಪ್ಪ ಬಾರಿಕಾರ ಸೇರಿದಂತೆ ಅನೇಕ ರೈತ ಮುಖಂಡರುಗಳು ಉಪಸ್ಥಿತರಿದ್ದರು.

