
ಹಿರಿಯೂರು :
ಭಾರತ ದೇಶದ ಸಂವಿಧಾನವು ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದ್ದು, ಇಂತಹ ಸಂವಿಧಾನವನ್ನು ದೇಶಕ್ಕೆ ಕೊಡುಗೆಯಾಗಿ ನೀಡುವ ಮೂಲಕ ದೇಶದ ಜನರಲ್ಲಿ ಸಮಾನತೆ, ಭ್ರಾತೃತ್ವ ಮನೋಭಾವವನ್ನು ಹುಟ್ಟುಹಾಕಿದ ಡಾ.ಬಿ.ಆರ್.ಅಂಬೇಡ್ಕರ್ ರವರನ್ನು ನಾವು-ನೀವೆಲ್ಲರೂ ಸ್ಮರಿಸಬೇಕಿದೆ ಎಂಬುದಾಗಿ ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಆಲೂರು ಹನುಮಂತರಾಯಪ್ಪ ಹೇಳಿದರು.
ನಗರದ ವಾಣಿವಿಲಾಸ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ, ನಂತರ ಅವರು ಮಾತನಾಡಿದರು.

ನಮ್ಮ ಭಾರತ ದೇಶಕ್ಕೆ ಸಾಮಾಜಿಕ ಭದ್ರತೆಯನ್ನು ಒದಗಿಸಲು ಡಾ.ಅಂಬೇಡ್ಕರ್ ರವರು ಹಾಕಿಕೊಟ್ಟ ಮಾರ್ಗದಲ್ಲಿ ಇಂದು ನಾವೆಲ್ಲರೂ ನೆಮ್ಮದಿಯ ಬದುಕು ರೂಪಿಸಿಕೊಂಡಿದ್ದೇವಲ್ಲದೆ, ಸಮಾಜದಲ್ಲಿನ ಹಿಂದುಳಿದವರು, ಮಹಿಳೆಯರು, ಶೋಷಿತರು, ಶಿಕ್ಷಣವಂತರಾಗುವ ಮೂಲಕ ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆದುಕೊಳ್ಳಲು ನಮ್ಮ ದೇಶದ ಸಂವಿಧಾನವು ದಾರಿದೀಪವಾಗಿದೆ ಎಂಬುದಾಗಿ ಹೇಳಿದರು.
ಉಪನ್ಯಾಸಕಿ ಶ್ರೀಮತಿ ಗಂಗಮ್ಮ ಮಾತನಾಡಿ, ಶೋಷಿತ ಸಮುದಾಯದಲ್ಲಿ ಹುಟ್ಟಿ ಕಷ್ಟ-ಕಾರ್ಪಣ್ಯಗಳನ್ನು ತಿಳಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ರವರು ಎಲ್ಲಾ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶದಿಂದ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠವಾದ ಸಂವಿಧಾನವನ್ನು ರಚಿಸುವ ಮೂಲಕ ದೇಶದಲ್ಲಿ ಸರ್ವರಿಗೂ ಸಮಾನತೆಯನ್ನು ತಂದುಕೊಡಲು ಕಾನೂನು ಚೌಕಟ್ಟು ರೂಪಿಸಿದರು ಎಂಬುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಉಪನ್ಯಾಸಕರಾದ ಉಮೇಶ್ ಯಾದವ್ ರವರು “ಭಾರತದ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ, ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು,
ಮತ್ತು ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು, ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನು ದೊರೆಯುವಂತೆ ಮಾಡುವುದಕ್ಕಾಗಿ: ವ್ಯಕ್ತಿ ಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕೆ ಶ್ರದ್ದಾಪೂರ್ವಕ ಸಂಕಲ್ಪ ಮಾಡಬೇಕು ಎಂಬುದಾಗಿ ಪ್ರತಿಜ್ಞಾವಿಧಿ ಬೋಧಿಸಿದರು.

ಈ ಕಾರ್ಯಕ್ರಮದಲ್ಲಿ ವಾಣಿವಿಲಾಸ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸೌಮ್ಯ, ವ್ಯವಸ್ಥಾಪಕಿ ಶ್ರೀಮತಿ ವಸಂತಾ, ಆಡಳಿತಾಧಿಕಾರಿ ಶ್ರೀಮತಿ ಹೇಮಲತಾ, ಕೋ-ಆರ್ಡಿನೇಟರ್ ಗಳಾದ ಶ್ರೀಮತಿ ನಂದಿನಿ, ಶ್ರೀಮತಿ ರಚನ, ಶ್ರೀಮತಿ ಗಂಗಮ್ಮ ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಭಾಗ್ಯ, ಉಮೇಶ್ ಯಾದವ್, ಶಿವರಾಜ್ ನಾಯಕ,ಸುರೇಶ್ ಸೇರಿದಂತೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
