
ಹಿರಿಯೂರು:
ನಗರದ ವಿವಿಧ ಬಡಾವಣೆಗಳಲ್ಲಿ ನಗರದ ನಾಗರೀಕರು ಮನೆಮನೆಗೆ ಬಂದ ಜೋಕುಮಾರಸ್ವಾಮಿಯನ್ನು ವಿಶೇಷ ಭಕ್ತಿಯಿಂದ ಪೂಜಿಸಿ, ಜೋಕುಮಾರ ಸ್ವಾಮಿಯ ಕೃಪೆಗೆ ಪಾತ್ರರಾದರು. ಗೌರಿ-ಗಣೇಶ ಹಬ್ಬದ ನಂತರ ಪ್ರತಿ ವರ್ಷ ಜೋಕುಮಾರಸ್ವಾಮಿಯು ಭೂಲೋಕಕ್ಕೆ ಬರುತ್ತಾನೆ ಎಂಬ ಪ್ರತೀತಿ ಜನರಲ್ಲಿ ಇದೆ.

ಜೋಕುಮಾರಸ್ವಾಮಿಯು ಭೂಲೋಕದಲ್ಲಿ ಜನರ ಸಂಕಷ್ಟಗಳನ್ನು ಅರಿತು ಈಶ್ವರನಿಗೆ ತಿಳಿಸುತ್ತಾನೆ. ನಂತರ ಭೂಲೋಕಕ್ಕೆ ಪರಮೇಶ್ವರ ಉತ್ತಮ ಮಳೆ-ಬೆಳೆಯನ್ನು ಕರುಣಿಸುತ್ತಾನೆ ಎಂಬುದು ಬಹಳ ಪುರಾತನ ಕಾಲದಿಂದ ನಮ್ಮ ಜನರ ನಂಬಿಕೆಯಾಗಿದೆ, ಹೀಗಾಗಿ ಮನೆಗೆ ಬರುವ ಜೋಕುಮಾರ ಸ್ವಾಮಿಯನ್ನು ಭಕ್ತಿಯಿಂದ ಪೂಜಿಸಿ, ಕಾಣಿಕೆ ನೀಡಿ, ಉತ್ತಮ ಮಳೆ-ಬೆಳೆಗಾಗಿ ಪ್ರಾರ್ಥಿಸುವರು.

ಜೋಕುಮಾರಸ್ವಾಮಿಯನ್ನು ಪುಟ್ಟಿಯಲ್ಲಿ ಪ್ರತಿಷ್ಟಾಪಿಸಿಕೊಂಡು ಭಕ್ತರ ಮನೆಗಳಿಗೆ ಭೇಟಿ ನೀಡಿ ಭಕ್ತರು ಕೊಡುವ ಕಾಣಿಕೆ, ಕಾಯಿ, ಹಣ್ಣು, ಹೂವು, ಅಕ್ಕಿ, ಬೇಳೆ, ಬೆಲ್ಲ ಸ್ವೀಕರಿಸುತ್ತಾರೆ. ಜೋಕುಮಾರನನ್ನು ಹೊತ್ತು ತರುವ ಶ್ರೀಮತಿ ಜಯಮ್ಮ, ರೇಖಮ್ಮ, ಶಿವಮ್ಮ, ಹಾಗೂ ಸುಧಮ್ಮ ಇವರುಗಳು ಅತ್ಯಂತ ಭಕ್ತಿಭಾವದಿಂದ ಭಕ್ತರ ಮನೆಗಳಿಗೆ ಹೋಗಿ ಜೋಕುಮಾರಸ್ವಾಮಿಯ ದರ್ಶನ ಮಾಡಿಸಿ, ಗೃಹಿಣಿಯರು ನೀಡುವ ಕಾಣಿಕೆಗಳನ್ನು ಸ್ವೀಕರಿಸಿ, ಶುಭಹಾರೈಸುವರು.

