May 31, 2026
003

ಹಿರಿಯೂರು:

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆಯ ಸದ್ದು ದಿನದಿಂದ ದಿನಕ್ಕೆ ಜೋರಾಗುತ್ತಿದ್ದು, ರಾಜಕೀಯ ಪಕ್ಷಗಳಲ್ಲಿ ತೆರೆಮರೆಯ ಕಸರತ್ತು ತೀವ್ರಗೊಂಡಿದೆ. ಚುನಾವಣಾ ಆಯೋಗದಿಂದ ಅಧಿಕೃತ ಅಧಿಸೂಚನೆ ಇನ್ನು ಪ್ರಕಟವಾಗದಿದ್ದರೂ, ಮೈತ್ರಿಕೂಟದ ಟಿಕೆಟ್‌ಗಾಗಿ ಆಕಾಂಕ್ಷಿಗಳ ದಂಡೇ ಸಜ್ಜಾಗುತ್ತಿದ್ದು, ಕ್ಷೇತ್ರಾದ್ಯಂತ ರಾಜಕೀಯ ತಾಪಮಾನ ಏರತೊಡಗಿದೆ. ‘ವರಿಷ್ಠರ ನಿರ್ಧಾರವೇ ನನ್ನ ನಿರ್ಧಾರ’ ಎಂಬುದಾಗಿ ಬಿಜೆಪಿ ಅಧ್ಯಕ್ಷ ಅಭಿನಂದನ್ ತಿಳಿಸಿದ್ದಾರೆ.

​​ಕ್ಷೇತ್ರದ ಸದ್ಯದ ರಾಜಕೀಯ ಬೆಳವಣಿಗೆಗಳು ಹಾಗೂ ಉಪಚುನಾವಣೆಯ ಕುರಿತು ಹಿರಿಯೂರು ತಾಲ್ಲೂಕು ಬಿಜೆಪಿ ಅಧ್ಯಕ್ಷರಾದ ಅಭಿನಂದನ್ ಅವರು *’ಪವರ್ ಫೋಕಸ್ ನ್ಯೂಸ್’*ಗೆ ವಿಶೇಷವಾಗಿ ಪ್ರತಿಕ್ರಿಯಿಸಿ, ಟಿಕೆಟ್ ಹಂಚಿಕೆ ಮತ್ತು ಮೈತ್ರಿಕೂಟದ ಅಭ್ಯರ್ಥಿ ಆಯ್ಕೆ ಕುರಿತು ಮಾತನಾಡಿದ ಅವರು, “ಉಪಚುನಾವಣೆಯಲ್ಲಿ ಪಕ್ಷದ ವರಿಷ್ಠರ ನಿರ್ಧಾರವೇ ನನ್ನ ನಿರ್ಧಾರ. ಪಕ್ಷ ಯಾರಿಗೆ ಮಣೆ ಹಾಕಿದರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ,” ಎಂದು ಸ್ಪಷ್ಟಪಡಿಸಿದರು.

​​ಇದೇ ವೇಳೆ ಕಮಲ ಪಾಳಯದ ಮುಂದಿನ ರಾಜಕೀಯ ಕಾರ್ಯತಂತ್ರ ಬಿಚ್ಚಿಟ್ಟ ತಾಲ್ಲೂಕು ಅಧ್ಯಕ್ಷರು, “ಕಾಂಗ್ರೆಸ್ ಮುಕ್ತ ಹಿರಿಯೂರು ಮಾಡುವುದೇ ನನ್ನ ಮುಖ್ಯ ಗುರಿ” ಎಂದು ಗುಡುಗಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆಯನ್ನು ತಮಗೆ ಪೂರಕವಾಗಿಸಿಕೊಳ್ಳಲು ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟ ಈಗಾಗಲೇ ತಳಮಟ್ಟದಲ್ಲಿ ಸಂಘಟನೆಗೆ ಚುರುಕು ಮುಟ್ಟಿಸಿದೆ.

​ಕಾಂಗ್ರೆಸ್ ಪಕ್ಷವು ಅನುಕಂಪದ ಅಸ್ತ್ರದ ಮೂಲಕ ಚುನಾವಣಾ ಗೆಲುವಿನ ಲೆಕ್ಕಾಚಾರದಲ್ಲಿದ್ದರೆ, ಅದಕ್ಕೆ ಕೌಂಟರ್ ನೀಡಲು ಬಿಜೆಪಿ ತಾಲ್ಲೂಕು ಅಧ್ಯಕ್ಷ ಅಭಿನಂದನ್ ನೇತೃತ್ವದ ಯುವ ಪಡೆ ಆಕ್ರಮಣಕಾರಿ ತಂತ್ರಗಳೊಂದಿಗೆ ಅಖಾಡಕ್ಕೆ ಇಳಿಯುತ್ತಿರುವುದು ಈಗ ಕ್ಷೇತ್ರದ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

About The Author

Leave a Reply

Your email address will not be published. Required fields are marked *