May 31, 2026
003

ಹಿರಿಯೂರು :

ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿದ್ದ ಮಾನ್ಯ ಶ್ರೀ ಡಿ.ಸುಧಾಕರ್ ಅವರು ನಿಧನ ನಿಜಕ್ಕೂ ಬೇಸರ ತಂದಿದ್ದು, ಇದರಿಂದ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ, ಎಂಬುದಾಗಿ ಧರ್ಮಸ್ಥಳದ ಧರ್ಮದರ್ಶಿಗಳಾದ ಡಿ.ವೀರೇಂದ್ರ ಹೆಗ್ಗಡೆಯವರು ವಿಷಾದ ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ರವರು ಇತ್ತೀಚೆಗೆ ಧರ್ಮಸ್ಥಳಕ್ಕೆ ಬಂದ ಸಂದರ್ಭದಲ್ಲಿ ತಮ್ಮ ಆನೆಮರಿ ‘ಶಿವಾನಿ’ಯ ಹುಟ್ಟುಹಬ್ಬದಲ್ಲಿ ಸಂತೋಷದಿಂದ ಭಾಗವಹಿಸಿ ಸಂಭ್ರಮಿಸಿರುವುದ  ಕ್ಷಣವನ್ನು ಸ್ಮರಿಸಿಕೊಂಡರು.

ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ಅನುಭವ ಹೊಂದಿದ್ದ ಅವರು ಶಾಸಕರಾಗಿ, ಸಚಿವರಾಗಿ ಉತ್ತಮ ಸೇವೆ ಮಾಡಿರುತ್ತಾರೆ. ಶ್ರೀಕ್ಷೇತ್ರ ಧರ್ಮಸ್ಥಳದ ಅಪಾರ ಅಭಿಮಾನಿಯೂ, ಭಕ್ತರೂ ಆಗಿದ್ದು ಅನೇಕ ಬಾರಿ ಇಲ್ಲಿಗೆ ಬಂದು ದೇವರ ದರ್ಶನವನ್ನು ಪಡೆದು ನನ್ನೊಂದಿಗೆ ಹೆಚ್ಚು ಕಾಲ ಮಾತುಕತೆ ನಡೆಸಿ ಹೋಗುತ್ತಿದ್ದರು.

ಸರಕಾರವು ತಮಗೆ ನೀಡಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ ಜನಾನುರಾಗಿಯಾಗಿದ್ದ, ಅವರು ಪಕ್ಷದ ವರಿಷ್ಟರೊಂದಿಗೆ ಸೌಹಾರ್ದಯುತ ಸಂಪರ್ಕವನ್ನು ಇಟ್ಟುಕೊಂಡು ತಮ್ಮ ಕ್ಷೇತ್ರದಲ್ಲಿ ಉತ್ತಮ ಸೇವಾಕಾರ್ಯಗಳನ್ನು ಮಾಡುತ್ತಿರುವುದನ್ನು ನಾವು ಗಮನಿಸಿದ್ದೇನೆ.

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಸಮಿತಿಯ ಸಭೆಗಳಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದ ಅವರು, ಮಸ್ತಕಾಭಿಷೇಕದ ಯಶಸ್ಸಿಗೆ ಸಕ್ರಿಯ ಸಹಕಾರ ನೀಡಿ ಪ್ರೋತ್ಸಾಹಿಸುತ್ತಿದ್ದರು.

ಅಲ್ಪಕಾಲದ ಅನಾರೋಗ್ಯದಿಂದ ಅಗಲಿದ ಡಿ.ಸುಧಾಕರ್ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದ ಅವರು ಹಾಗೂ ಕುಟುಂಬಸ್ಥರಿಗೆ ಅವರ ಅಗಲುವಿಕೆಯಿಂದ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀಮಂಜುನಾಥಸ್ವಾಮಿ ಹರಸಲೆಂದು ಡಿ.ವೀರೇಂದ್ರ ಹೆಗ್ಗಡೆಯವರು ಪ್ರಾರ್ಥಿಸಿದ್ದಾರೆ.

About The Author

Leave a Reply

Your email address will not be published. Required fields are marked *