April 21, 2026
000002

ಹಿರಿಯೂರು:

ತಾಲೂಕು ಕೇಂದ್ರವಾಗಿ ವೇಗವಾಗಿ ಬೆಳೆಯುತ್ತಿರುವ ಹಿರಿಯೂರು ನಗರದಲ್ಲಿ ಸಂಚಾರ ವ್ಯವಸ್ಥೆ ಹದಗೆಡುತ್ತಿದ್ದು, ಪಾದಾಚಾರಿಗಳು ಮತ್ತು ವಾಹನ ಸವಾರರು ಪ್ರತಿನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಮಾನವ ಬಂಧುತ್ವ ವೇದಿಕೆಯ ತಾಲೂಕು ಮಹಿಳಾ ಅಧ್ಯಕ್ಷರಾದ ಶ್ರೀಮತಿ ಅಂಬಿಕಾ ಅವರು ನಗರದ ಸಂಚಾರ ವ್ಯವಸ್ಥೆಯನ್ನು ಸರಿಪಡಿಸುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

​ಸರ್ಕಾರಿ ಆಸ್ಪತ್ರೆಯಿಂದ ಗಾಂಧಿ ಸರ್ಕಲ್‌ ವರೆಗಿನ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಕೆಲವರು ಐಐಎಫ್‌ಎಲ್, ಕರ್ನಾಟಕ ಕಂಪ್ಯೂಟರ್ ಸೆಂಟರ್ ಮತ್ತು ಪೊಲೀಸ್ ಠಾಣೆಯ ಮುಂದೆಯೇ ತಮ್ಮ ಬೈಕುಗಳನ್ನು ನಿಲ್ಲಿಸಿ, ಅಲ್ಲಿಂದ ಬಸ್ ಹತ್ತಿ ಚಿತ್ರದುರ್ಗ ಅಥವಾ ದಾವಣಗೆರೆಗೆ ತೆರಳುತ್ತಿದ್ದು. ಇದರಿಂದ ಇಡೀ ದಿನ ರಸ್ತೆ ಬದಿಯಲ್ಲಿ ವಾಹನಗಳು ನಿಲ್ಲುತ್ತಿರುವುದು ಸಂಚಾರಕ್ಕೆ ದೊಡ್ಡ ಅಡ್ಡಿಯಾಗಿದೆ.

​ಫುಟ್‌ಪಾತ್ ಹಾಗೂ ರಸ್ತೆಗಳ ಅಂಚಿನಲ್ಲಿ ಬೈಕ್‌ಗಳನ್ನು ಅಡ್ಡಾದಿಡ್ಡಿ ನಿಲ್ಲಿಸುತ್ತಿರುವುದರಿಂದ ಶಾಲಾ ಮಕ್ಕಳು ಮತ್ತು ಪಾದಾಚಾರಿಗಳು ನಡೆದಾಡಲು ಜಾಗವಿಲ್ಲದೆ ರಸ್ತೆಯ ಮಧ್ಯೆ ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಸ್ವತಃ ಪೊಲೀಸ್ ಠಾಣೆಗೆ ಕೆಲಸದ ನಿಮಿತ್ತ ಕಾರಿನಲ್ಲಿ ಬರುವವರಿಗೂ ಸರಿಯಾದ ಪಾರ್ಕಿಂಗ್ ಜಾಗವಿಲ್ಲದಂತಾಗಿದೆ.

​ಜನರು ಕೂಡ ವಾಹನಗಳನ್ನು ವ್ಯವಸ್ಥಿತವಾಗಿ ನಿಲ್ಲಿಸುವಲ್ಲಿ ವಿಫಲರಾಗುತ್ತಿದ್ದಾರೆ. ಈ ಬಗ್ಗೆ ಕಳಕಳಿ ವ್ಯಕ್ತಪಡಿಸಿರುವ ಅಂಬಿಕಾ ಅವರು, “ಹಿರಿಯೂರು ನಗರ ಪೊಲೀಸರು ಈಕೂಡಲೇ ಎಚ್ಚೆತ್ತುಕೊಳ್ಳಬೇಕು. ನೋ-ಪಾರ್ಕಿಂಗ್ ವಲಯಗಳಲ್ಲಿ ವಾಹನ ನಿಲ್ಲಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ದಂಡ ವಿಧಿಸುವ ಮೂಲಕ ಅವರಲ್ಲಿ ಜಾಗೃತಿ ಮೂಡಿಸಬೇಕು.

ಹಿರಿಯೂರು ನಗರದಲ್ಲಿ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ನಗರದ ಪ್ರಮುಖ ವೃತ್ತಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಸರಿಪಡಿಸುವ ಮೂಲಕ ನಗರಸಭೆ ಹಾಗೂ ಪೋಲೀಸ್ ಇಲಾಖೆ ಪಾದಾಚಾರಿಗಳಿಗೆ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು” ಎಂಬುದಾಗಿ ಮಾನವ ಬಂಧುತ್ವ ವೇದಿಕೆಯ ತಾಲೂಕು ಮಹಿಳಾ ಅಧ್ಯಕ್ಷರಾದ ಶ್ರೀಮತಿ ಅಂಬಿಕಾ ಅವರು ಮನವಿ ಮಾಡಿದ್ದಾರೆ.

ವರದಿ : ಅರ್ಜುನ್ ಬ್ಯಾಡರಹಳ್ಳಿ

About The Author

Leave a Reply

Your email address will not be published. Required fields are marked *