October 31, 2026
0001

ಹಿರಿಯೂರು :

ಪದವೀಧರರ ಹಿತಾಸಕ್ತಿ ಕಾಪಾಡುವುದು ಹಾಗೂ ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವುದು ನನ್ನ ಪ್ರಮುಖ ಆದ್ಯತೆಯಾಗಿದ್ದು, ರಾಜ್ಯದ ಪದವೀಧರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಹಾಗೂ ಬದ್ಧತೆಯಿಂದ ಕೆಲಸ ಮಾಡುತ್ತೇನೆ ಎಂಬುದಾಗಿ ವಿಧಾನ ಪರಿಷತ್ ಸದಸ್ಯರಾದ  ಕೆ.ಎಂ. ಸುರೇಶ್ ರವರು ಭರವಸೆ ನೀಡಿದರು.

ನಗರದ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದವೀಧರರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅವರ ಬೇಡಿಕೆಗಳ ಕುರಿತು ನಿರಂತರವಾಗಿ ಧ್ವನಿ ಎತ್ತಲಿದ್ದೇನೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಭ್ರಷ್ಟ ವ್ಯವಸ್ಥೆಯಿಂದ ಕೂಡಿದ್ದು, ಸರ್ಕಾರದ ಬಗ್ಗೆ ಜನರಲ್ಲಿ ನಂಬಿಕೆ ಇಲ್ಲದಂತಾಗಿದೆ ಎಂದರಲ್ಲದೆ,

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪುತ್ತಿಲ್ಲ. ಹಿರಿಯೂರು ತಾಲೂಕಿನಲ್ಲಿ ಎಷ್ಟು ಯುವಕರಿಗೆ ಯುವನಿಧಿ ಯೋಜನೆಯ ಪ್ರಯೋಜನ ದೊರೆತಿದೆ ಎಂಬುದನ್ನು ಪರಿಶೀಲಿಸಿದರೆ ವಾಸ್ತವಾಂಶ ತಿಳಿಯಲಿದೆ, ಜನತೆ ಈ ಎಲ್ಲಾ ಅಂಶಗಳಿಂದ ಬೇಸತ್ತು, ಪದವೀಧರರ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿದ್ದಾರೆ ಎಂಬುದಾಗಿ ಹೇಳಿದರು.

ಪ್ರಬುದ್ಧ ಮತದಾರರು ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಮಾರುಹೋಗಿಲ್ಲ, ಜೆಡಿಎಸ್ ಪಕ್ಷದ ಸಂಪೂರ್ಣ ಬೆಂಬಲದೊಂದಿಗೆ ಮೈತ್ರಿ ಪಕ್ಷದ ಅಭ್ಯರ್ಥಿಗಳು ನಾಲ್ಕು ಸ್ಥಾನಗಳಲ್ಲಿಯೂ ಜಯಗಳಿಸಿದ್ದೇವೆ. ಚುನಾವಣೆಯಲ್ಲಿ ಬೆಂಬಲಿಸಿದ ಮೈತ್ರಿ ನಾಯಕರು, ಕಾರ್ಯಕರ್ತರು ಹಾಗೂ ಮತದಾರರಿಗೆ ಧನ್ಯವಾದ ಎಂಬುದಾಗಿ ತಿಳಿಸಿದರು.

ಹಿರಿಯೂರು ಉಪಚುನಾವಣೆಯಲ್ಲಿ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು ಪಕ್ಷದ ವರಿಷ್ಠರ ನಿರ್ಧಾರವೇ ಅಂತಿಮ, ಅಭ್ಯರ್ಥಿ ಆಯ್ಕೆ ಕುರಿತು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ವರಿಷ್ಠರು  ತೀರ್ಮಾನ ಕೈಗೊಳ್ಳಲಿದ್ದಾರೆ. ನಾನೊಬ್ಬ ಸಾಮಾನ್ಯ ಕಾರ್ಯಕರ್ತನಷ್ಟೇ. ಇಲ್ಲಿ ಮಂಡಲ ಅಧ್ಯಕ್ಷರಿದ್ದಾರೆ, ಸಮನ್ವಯ ಸಮಿತಿಯೂ ಇದೆ.

ಅಲ್ಲದೆ ಎರಡೂ ಪಕ್ಷಗಳ ವರಿಷ್ಠರು ಚುನಾವಣೆಯ ಅಭ್ಯರ್ಥಿಯನ್ನು ನಿರ್ಧರಿಸಲಿದ್ದು, ಪಕ್ಷದ ತೀರ್ಮಾನದಂತೆ ಹಿರಿಯೂರು ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೇನೆ. ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯೇ ವಿಜಯ ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಮೊದಲ ಬಾರಿಗೆ ಹಿರಿಯೂರಿಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ನಗರದ ಗಾಂಧಿ ವೃತ್ತದಲ್ಲಿ ಜೆಡಿಎಸ್  ಹಾಗೂ ಬಿಜೆಪಿ ಮೈತ್ರಿ ಕಾರ್ಯಕರ್ತರು ವಿಧಾನ ಪರಿಷತ್ ಸದಸ್ಯರಾದ ಕೆ.ಎಂ.ಸುರೇಶ್ ಅವರನ್ನು ಸ್ವಾಗತಿಸಿ, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಕೆ ಅಭಿನಂದನ್, ಜೆಡಿಎಸ್ ಹಿರಿಯ ಮುಖಂಡ ಎಂ ರವಿಂದ್ರಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಕೆ ಶಂಕರಮೂರ್ತಿ ಇತರರು ಮಾತನಾಡಿದರು.

ಈ ಸಭೆಯಲ್ಲಿ  ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಮಂಜುನಾಥ್, ಜಿ.ಪಂ.ಮಾಜಿ ಅಧ್ಯಕ್ಷ ಎಂ.ಜಯಣ್ಣ, ವಕೀಲರಾದ ಕೂಡ್ಲಹಳ್ಳಿ ಶಂಕರಮೂರ್ತಿ, ಬಿಜೆಪಿ ಮುಖಂಡರಾದ ಎಂ.ಎಸ್.ರಾಘವೇಂದ್ರ, ಎ.ರಾಘವೇಂದ್ರ, ಚಿದಾನಂದ್, ಗೋವಿಂದರಾಜು, ಶ್ರವಣಗೆರೆ ಹನುಮಂತರಾಯ, ಎಸ್.ಎನ್.ಎಲ್. ವೆಂಕಟೇಶ್, ನಿತಿನ್ ಗೌಡ, ವಿಶ್ವನಾಥ್, ಜೆಬಿ ರಾಜಣ್ಣ, ಕೆ.ಟಿ.ಹನುಮಂತರಾಯ, ಬಸವರಾಜ ನಾಯಕ, ಜಲ್ದಪ್ಪ, ಶಿವಣ್ಣ , ರವಿ, ಮಂಜುನಾಥ್, ರಾಕೇಶ್, ಪ್ರಜ್ವಲ್, ಗೋವಿಂದಪ್ಪ, ದೇವರಾಜ್, ರಮೇಶ್, ಪರಮೇಶ್, ವಿಜಯ್ , ಯಲ್ಲಪ್ಪ, ಸ್ಟೂಡಿಯೋ ಗೋವಿಂದಪ್ಪ, ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *