
ಹಿರಿಯೂರು :
ಹೋಬಳಿ ವ್ಯಾಪ್ತಿಯ ಎಲ್ಲಾ ಕೆರೆಗಳಿಗೆ ಪೂರ್ಣ ಪ್ರಮಾಣದಲ್ಲಿ ನೀರು ತುಂಬಿಸಬೇಕು, ನೀರಿನ ಹೋರಾಟ ರೈತರ ಅಳಿವು ಉಳಿವಿನ ಪ್ರಶ್ನೆಯಾಗಿದೆ, ಈ ಕುರಿತು ಪಕ್ಷಾತೀತವಾಗಿ ಎಲ್ಲರೂ ಒಗ್ಗೂಡಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಬೇಕಿದೆ ಎಂಬುದಾಗಿ ಧರ್ಮಪುರ ಹೋಬಳಿ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಸಕ್ಕರ ಗಿರೀಶ್ ತಿಳಿಸಿದರು
ತಾಲೂಕಿನ ಧರ್ಮಪುರದ ಲಕ್ಷ್ಮಿ ದೇಗುಲದ ಆವರಣದಲ್ಲಿ ಮಂಗಳವಾರ ಧರ್ಮಪುರ ಏತ ನೀರಾವರಿ ಎರಡನೇ ಹಂತದ ಯೋಜನೆ ಜಾರಿಗಾಗಿ ಪಕ್ಷತೀತ ಹೋರಾಟಕ್ಕೆ ಕರೆಯಲಾಗಿದ್ದ ಸಭೆಯಲ್ಲಿ ರೈತರು ಸರ್ವಾಲುಮತದಿಂದ ತೀರ್ಮಾನಕ್ಕೆ ಬಂದಿದ್ದು, ಸಭೆಯಲ್ಲಿ ಹೋಬಳಿಯ ನೂರಾರು ರೈತರು ಭಾಗವಹಿಸಿ ನೀರಿಗಾಗಿ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು
ಧರ್ಮಪುರ ಏತ ನೀರಾವರಿ ಮೊದಲ ಹಂತದ ಯೋಜನೆ ರೈತರಲ್ಲಿ ಭರವಸೆ ಮೂಡಿಸಿದ್ದು, ಈ ಯೋಜನೆ ಅಡಿ ನೀರಿನ ಅಲೋಕೇಶನ್ ಇಲ್ಲದೆ ಕೆರೆಗಳಿಗೆ ಪೂರ್ಣ ಪ್ರಮಾಣದಲ್ಲಿ ನೀರು ತುಂಬಿಸಲು ಸಾಧ್ಯವಾಗಿಲ್ಲ, ಎರಡನೇ ಹಂತದ ಯೋಜನೆ ಜಾರಿ ಆದರೆ ಮಾತ್ರ ರೈತರಿಗೆ ಅನುಕೂಲವಾಗಲಿದ್ದು, ಯೋಜನೆ ಕಾರ್ಯಗತಕ್ಕೆ ಮುಖ್ಯಮಂತ್ರಿಗಳ ಬಳಿಗೆ ಪಕ್ಷತೀತವಾಗಿ ನಿಯೋಗ ತೆರಳುವುದು ಒಳಿತು ಎಂದು ರೈತರು ಸಲಹೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಕ್ ಮಂಜು ಮಾತನಾಡಿ, ಜೆಜಿಹಳ್ಳಿ ಹೋಬಳಿ 17ಕೆರೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ 244 ಕೋಟಿ ರೂ ಅನುದಾನ ಮೀಸಲಿಡಲಾಗಿದೆ, ಧರ್ಮಪುರ ಏತ ನೀರಾವರಿ ಎರಡನೇ ಹಂತದ ಯೋಜನೆಗೆ 35 ಕೋಟಿ ರೂ ಅಗತ್ಯವಿದೆ, ನೂರಕ್ಕೆ ನೂರು ಈ ಯೋಜನೆಗೆ ಅನುದಾನ ಸಿಗಲಿದ್ದು, ಉಪಚುನಾವಣೆಗೂ ಮುನ್ನ ಯೋಜನೆ ಕಾರ್ಯಗತವಾಗಲಿದೆ ಎಂಬುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಭೆಯಲ್ಲಿ ಜಿ.ಪಂ.ಮಾಜಿ ಅಧ್ಯಕ್ಷರಾದ ಬಿ.ಎಸ್.ರಘುನಾಥ್, ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ರೈತ ಮುಖಂಡರಾದ ಬಂಡಿ ಈರಣ್ಣ, ಹರಿಯಬ್ಬೆ ಮಹಾಂತೇಶ್, ತಾಪಂ ಮಾಜಿ ಸದಸ್ಯ ಕೆ.ಎಸ್.ವೀರಣ್ಣ, ಜುಂಜೇಗೌಡ, ಚಿಕ್ಕೇಗೌಡ, ಖಂಡೇನಳ್ಳಿ ಮಂಜುನಾಥ್, ಶಿವಮೂರ್ತಿ, ವೆಂಕಟರಾಮ, ಶ್ರವಣಗೆರೆಗೌಡಪ್ಪ, ನಿವೃತ್ತ ಮುಖ್ಯ ಶಿಕ್ಷಕ ಹೊಸಕೆರೆ ಹನುಮಂತರಾಯಪ್ಪ, ಜಿಪಂ ಕೆಡಿಪಿ ಸದಸ್ಯ ತಿಮ್ಮಣ್ಣ, ಹಲಗಲದ್ದಿ ಕೃಷ್ಣಮೂರ್ತಿ, ರಾಮಣ್ಣ ಮದ್ದಿಹಳ್ಳಿ, ವೀರೇಂದ್ರ ಪಾಟೀಲ್, ನಿವೃತ್ತ ಯೋಧರಾದ ಶಿವಣ್ಣ, ಡಿ.ಎಂ.ಯೋಗೇಶ್, ಸಣ್ಣೀರಪ್ಪ, ರಾಮಚಂದ್ರಪ್ಪ, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್ ಸೇರಿದಂತೆ 50 ಹಳ್ಳಿಗಳ ರೈತರು ಭಾಗವಹಿಸಿದ್ದರು.
