March 2, 2026
000002

ಹಿರಿಯೂರು:

ಮಹರ್ಷಿ ವಾಲ್ಮೀಕಿ ಅವರು ಭಾರತೀಯ ಸಂಸ್ಕೃತಿಯ ಅತ್ಯಂತ ಶ್ರೇಷ್ಠ ಕವಿಗಳು ಹಾಗೂ ಮಹಾನ್ ಜ್ಞಾನಿಗಳಾಗಿದ್ದು, ಅವರು ಬರೆದಿರುವ ರಾಮಾಯಣ ಮಹಾಕಾವ್ಯವು ಕೇವಲ ಸಾಹಿತ್ಯ ಕೃತಿ ಅಲ್ಲ, ಅದು ಧರ್ಮ, ನಿಷ್ಠೆ, ಕರ್ತವ್ಯ ಮತ್ತು ಮಾನವೀಯತೆಯ ಪಾಠಗಳನ್ನು ನೀಡುವ ಮಹಾಕಾವ್ಯವಾಗಿದೆ, ಈ ಕಾವ್ಯವು ಕೋಟಿ ಕೋಟಿ ಜನರ ಹೃದಯಗಳಲ್ಲಿ ಧರ್ಮದ ಬೆಳಕನ್ನು ಹರಡುತ್ತಿದೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಹೇಳಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀಮಹರ್ಷಿ ವಾಲ್ಮೀಕಿಯ  ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಆಶ್ವೀಜ ಮಾಸದ ಹುಣ್ಣಿಮೆ ದಿನವನ್ನು ಮಹರ್ಷಿ ವಾಲ್ಮೀಕಿಯವರ ಜನ್ಮದಿನವಾಗಿ ಆಚರಿಸುತ್ತಿದ್ದು, ಮಹರ್ಷಿ ವಾಲ್ಮೀಕಿಯವರು ರಚಿಸಿದ ರಾಮಾಯಣ ಮಹಾಕಾವ್ಯವು ಮಾನವೀಯ ಮೌಲ್ಯಗಳ ಸಂದೇಶವನ್ನು ಜಗತ್ತಿಗೆ ಸಾರುತ್ತಿದೆ, ಇಂದಿನ ಯುವಪೀಳಿಗೆಯು ಇಂತಹ ರಾಮಾಯಣ ಮಹಾಕಾವ್ಯವನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂಬುದಾಗಿ ಅವರು ಹೇಳಿದರು.

ಉಪನ್ಯಾಸ ನೀಡಿ ಮಾತನಾಡಿದ ಗಂಗಾಧರ್ ರವರು, ಮಹರ್ಷಿ ವಾಲ್ಮೀಕಿ ಅವರನ್ನು “ಆದಿಕವಿ”, ಅಂದರೆ ಕವಿಗಳಲ್ಲಿ ಮೊದಲನೆಯವರು ಎಂದು ಗೌರವಿಸುತ್ತೇವೆ ಅವರು ಬರೆದಿರುವ ರಾಮಾಯಣ ಕಾವ್ಯವು ನಮ್ಮ ದೇಶದ ಅತಿ ಪ್ರಾಚೀನ ಮತ್ತು ಮಹಾನ್ ಗ್ರಂಥಗಳಲ್ಲಿ ಒಂದಾಗಿದೆ. ಅದು ನಮಗೆ ಸತ್ಯ, ಧರ್ಮ, ನಿಷ್ಠೆ ಮತ್ತು ಮಾನವೀಯತೆ ಎಂಬ ಮೌಲ್ಯಗಳನ್ನು ಕಲಿಸುತ್ತದೆ ಎಂಬುದಾಗಿ ಹೇಳಿದರು.

ತಾಲ್ಲೂಕು ತಹಶೀಲ್ದಾರ್ ಸಿದ್ದೇಶ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಸತ್ಯ, ಧರ್ಮ ಮತ್ತು ಕರ್ತವ್ಯಪಾಲನೆಯೇ ಮಾನವನ ನಿಜವಾದ ಅಲಂಕಾರವಾಗಿದ್ದು, ಇಂತಹ ಮೌಲ್ಯಗಳನ್ನು ಬೆಳೆಸುವ ಶಕ್ತಿ ವಾಲ್ಮೀಕಿ ಮಹರ್ಷಿಗಳು ರಚಿಸಿದ ರಾಮಾಯಣ ಮಹಾಕಾವ್ಯಕ್ಕಿದೆ, ಇಂತಹ ಮಹಾಕಾವ್ಯವನ್ನು ರಚಿಸುವ ಮೂಲಕ ಅವರು ಜಗತ್ತಿಗೆ ಸಾರಿದ ಸಂದೇಶಗಳು ಇಡೀ ಮನುಕುಲಕ್ಕೆ ಆದರ್ಶಪ್ರಾಯವಾಗಿದೆ ಎಂಬುದಾಗಿ ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಬಾಲಕೃಷ್ಣ, ಉಪಾಧ್ಯಕ್ಷೆ ಶ್ರೀಮತಿಮಂಜುಳಾ, ನಗರಸಭೆ  ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಎಂ.ಡಿ.ಸಣ್ಣಪ್ಪ, ತಾಲ್ಲೂಕು ತಹಶೀಲ್ದಾರ್ ಸಿದ್ದೇಶ್,  ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ,  ನಗರಸಭೆ ಪೌರಾಯುಕ್ತರಾದ ಎ.ವಾಸೀಂ, ನಗರಸಭೆ ಮಾಜಿ ಉಪಾಧ್ಯಕ್ಷೆ ಶ್ರೀಮತಿಅಂಬಿಕಾಆರಾಧ್ಯ, ತಾಲೂಕು ಪಂಚಾಯತಿ ಈ.ಓ ಪ್ರಮೋದ್, ಸಿಡಿಪಿಓ ರಾಘವೇಂದ್ರ,  ಮಹೇಶ್ವರ ರೆಡ್ಡಿ, ತೋಟಗಾರಿಕೆ ಇಲಾಖೆ ಮಂಜುನಾಥ್, ತಾಲೂಕು ಗ್ಯಾರಂಟಿ ಕಮಿಟಿ ಅಧ್ಯಕ್ಷರಾದ ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ಜೆ.ರಮೇಶ್, ವಾಲ್ಮೀಕಿ ಸಮಾಜದ ಮುಖಂಡರಾದ ಮಂಜುನಾಥ್, ಶ್ರೀಧರ್ ಹೇಮದಳ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಮೇಶ್, ಜಿ.ಪಂ.ಮಾಜಿ ಸದಸ್ಯ ನಾಗೇಂದ್ರನಾಯ್ಕ,ಕಾಂಗ್ರೆಸ್ ಮುಖಂಡರುಗಳಾದ ಕಲ್ಲಹಟ್ಟಿ ಹರೀಶ್, ವಾಲ್ಮೀಕಿ ಸಮಾಜದ ಮುಖಂಡರು ಮತ್ತು ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಆರಂಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ದಿನೇಶ್ ಸ್ವಾಗತ ಮಾಡಿದರು. ಮಹಮದ್ ಪಯಾಜ್ ಕಾರ್ಯಕ್ರಮ ನಿರೂಪಿಸಿದರು, ತಿಪ್ಪೇಸ್ವಾಮಿ ವಂದನಾರ್ಪಣೆ ಮಾಡಿದರು.

About The Author

Leave a Reply

Your email address will not be published. Required fields are marked *