
ಹಿರಿಯೂರು:
ದಿವಂಗತ ಶಂಕರ್ ನಾಗ್ ಹಾಗೂ ಬಾಲಸುಬ್ರಹ್ಮಣ್ಯ ಅವರು ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ್ದಾರೆ ಎಂಬುದಾಗಿ ಪೋಲೀಸ್ ಇಲಾಖೆಯ ನಿವೃತ್ತ ಅಧಿಕಾರಿಗಳಾದ ತಿಪ್ಪೇಸ್ವಾಮಿ ಅವರು ಹೇಳಿದರು.
ನಗರದ ಶ್ರೀಶೈಲ ವೃತ್ತದಲ್ಲಿ ಶಂಕರ್ ನಾಗ್ ಅಭಿಮಾನಿಗಳ ಕಲಾ ವೇದಿಕೆ, ಅಮೃತ್ ಮಹಿಳಾ ಸ್ವ-ಸಹಾಯ ಸಂಘ, ಮಿಮಿಕ್ರಿ ಹಾಸ್ಯ ಸಾಹಿತ್ಯ ಗಾಯನ, ಜಾನಪದ ಸಾಂಸ್ಕೃತಿಕ ಕಲಾವಿದರ ಸಂಘದ ಆಶ್ರಯದಲ್ಲಿ ಚಿತ್ರನಟ ಶಂಕರ್ ನಾಗ್ ಹಾಗೂ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂರವರ ಚಿರಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾರ್ಯಕ್ರಮದ ಆಯೋಜಕರು ಹಾಗೂ ಜೂನಿಯರ್ ಶಂಕರ್ ನಾಗ್ ಖ್ಯಾತಿಯ ಹೆಚ್.ಸಿ. ದಿವುಶಂಕರ್ ಅವರು ಮಾತನಾಡಿ, ಬೆಂಗಳೂರು ನಗರಕ್ಕೆ ಮೆಟ್ರೋ ನಟ ಶಂಕರ್ ನಾಗ್ ಅವರ ಕನಸಾಗಿತ್ತು. ಅದನ್ನು ಈಗಿನ ಸರ್ಕಾರದವರು ಮರೆತಿದ್ದಾರೆ. ಸರ್ಕಾರಕ್ಕೆ ಈ ಮಹಾನ್ ನಟನ ಮೇಲೆ ಒಂದಿಷ್ಟು ಗೌರವ ಏನಾದರೂ ಇದ್ದರೆ ಬೆಂಗಳೂರು ನಗರದ ಯಾವುದಾದರೂ ಒಂದು ಮೆಟ್ರೋ ನಿಲ್ದಾಣಕ್ಕೆ ಶಂಕರ್ ನಾಗ್ ಮೆಟ್ರೋ ನಿಲ್ದಾಣ ಎಂದು ನಾಮಕರಣ ಮಾಡಬೇಕು ಎಂದರಲ್ಲದೆ,
ರಾಜ್ಯ ಸರ್ಕಾರ ಎಲ್ಲಾ ಪ್ರಕಾರದ 50 ವರ್ಷ ಮೇಲ್ಪಟ್ಟ ಕಲಾವಿದರನ್ನು ತಾಲ್ಲೂಕು ಮಟ್ಟದಲ್ಲಿ ಗುರುತಿಸಿ ಮಾಸಾಶನ ನೀಡಬೇಕು, ಅಲ್ಲದೆ ರೈಲುಗಳಲ್ಲಿ, ಬಸ್ಸಿನಲ್ಲಿ ಕಲಾವಿದರಿಗೆ ಉಚಿತವಾಗಿ ಪ್ರಯಾಣಿಸಲು ಬಸ್ ಪಾಸ್ ನೀಡಬೇಕು. ಕಲಾವಿದರ ನಿಗಮ ಮಂಡಳಿ ಸ್ಥಾಪಿಸಬೇಕು. 35 ವರ್ಷ ಮೇಲ್ಪಟ್ಟ ಕಲಾವಿದರು ನಿಧನ ಹೊಂದಿದರೆ ಗೌರವಧನ ನೀಡಬೇಕು ಎಂಬುದಾಗಿ ಅವರು ಒತ್ತಾಯಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮುರಾ ನಾಗರಾಜ ವಹಿಸಿದ್ದರು. ಡಾ.ರಾಜ್ ಕುಮಾರ್ ಕಲಾ ಪರಿಷತ್ ರಾಜ್ಯಾಧ್ಯಕ್ಷ ಕೆ.ಪರಶುರಾಮಗೋರಪ್ಪ, ಕೆ.ಆರ್.ಪೇಟೆಯ ರಂಗಭೂಮಿ ಕಲಾವಿದ ಶಂಕರ್, ಹರಿಕಥೆ ವಿದ್ವಾನ್ ರತ್ನಾ, ಶಾಂತಾ, ಆರ್. ಮೋಹನ್, ವಿನೋದ್, ಜಗದೀಶ್, ರಂಗಸ್ವಾಮಿ, ಸಿದ್ದೇಶ್, ವಿಡಿಯೋಗ್ರಾಫರ್ ವಿನೋದ್ ಕುಮಾರ್, ಜಗದೀಶ್, ರಂಗಸ್ವಾಮಿ, ಕಾರ್ತಿಕ್, ತಿಪ್ಪೇಸ್ವಾಮಿ, ರಂಗಭೂಮಿ ಕಲಾವಿದರಾದ ಬಹದ್ದೂರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಣೆ ಮಾಡಲಾಯಿತು. ದಿವುಶಂಕರ್ ಅವರಿಂದ ಶಂಕರ್ ನಾಗ್ ರವರ ಚಲನಚಿತ್ರದ ಜನಪ್ರಿಯ ಗೀತೆಯಾದ ಜೊತೆಜೊತೆಯಲಿ ಹಾಡಿಗೆ ದಾಸಪ್ಪ ಮತ್ತು ಸಂಗಡಿಗರಿಂದ ಭಜನೆ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
