
ಹಿರಿಯೂರು :
ರಾಜ್ಯದಲ್ಲಿ ಕಟ್ಟಡ ಕಾರ್ಮಿಕರಿಗೆ ಉಪಯೋಗವಿಲ್ಲದ ಕಳಪೆಯಿಂದ ಕೂಡಿದ ಆಹಾರ ಕಿಟ್ ವೃತ್ತಿವಾರು ಸಲಕರಣೆಗಳ ಕಿಟ್, ಆಯುರ್ವೇದಿಕ್ ಔಷಧಿಗಳು, ಸುರಕ್ಷಿತಕಿಟ್ಟುಗಳು, ಆರೋಗ್ಯ ತಪಾಸಣಾ ಶಿಬಿರಗಳು ಇನ್ನು ಅನೇಕ ರೀತಿಯ ಮಂಡಳಿಯ ಮಾನದಂಡಗಳನ್ನು ಗಾಳಿಗೆ ತೂರಿ ಕಟ್ಟಡ ಕಾರ್ಮಿಕರ ಸೆಸ್ ಹಣವನ್ನು ದುರುಪಯೋಗ ಮಾಡುತ್ತಿರುವುದು ಖಂಡನೀಯ ಎಂಬುದಾಗಿ ಪ್ರಧಾನ ಕಾರ್ಯದರ್ಶಿಗಳಾದ ಮುಕುಂದ ಹೇಳಿದರು.
ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಸಿರಿಗನ್ನಡನಾಡು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ರಾಜ್ಯದ ಕಟ್ಟಡ ಕಾರ್ಮಿಕರಿಗೆ ಸಂಬಂಧಪಟ್ಟಂತೆ ಮಂಡಳಿಯಲ್ಲಿ ಸೆಸ್ ಹಣದ ದುರುಪಯೋಗವಾಗುತ್ತಿರುವುದನ್ನು ತಡೆಯುವಂತೆ ಒತ್ತಾಯಿಸಿ, ತಾಲ್ಲೂಕು ಕಾರ್ಮಿಕ ನಿರೀಕ್ಷಕರಾದ ರಾಜಣ್ಣರವರ ಮುಖಾಂತರ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿಗಳಿಗೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.
ಹೆಚ್ಚಿನ ಹಣದ ಟೆಂಡರ್ ಪಡೆದ ಸಂಸ್ಥೆಗಳು ಹಾಗೂ ಕಂಪನಿಗಳು ಕಟ್ಟಡ ಕಾರ್ಮಿಕರಿಗೆ ಕಡಿಮೆ ಮೂಲಬೆಲೆಯ ಸಲಕರಣೆಗಳು, ಸುರಕ್ಷತೆ ಕಿಟ್ಟುಗಳು, ಆರೋಗ್ಯಕ್ಕೆ ಸಂಬಂಧಿಸಿದಂತೆ ವಿಚಾರಗಳಲ್ಲಿ ಸೆಸ್ ಹಣವನ್ನು ಲೂಟಿ ಹೊಡೆಯುತ್ತಿದ್ದು, ಕಟ್ಟಡ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿರುವ ಸರ್ಕಾರ ಹಾಗೂ ಮಂಡಳಿಯೇ ಇದಕ್ಕೆ ನೇರಹೊಣೆಯಾಗಬೇಕಾಗುತ್ತದೆ,
ಕೂಡಲೇ ತಾವುಗಳು ಸರ್ಕಾರದಿಂದಾಗಲಿ ಅಥವಾ ಮಂಡಳಿಯ ಮುಖಾಂತರವಾಗಲಿ ಟೆಂಡರ್ ಕರೆಯುವುದನ್ನು ಬಿಟ್ಟು ರಾಜ್ಯದಲ್ಲಿ ನೊಂದಣಿ ಆಗಿರುವಂತಹ ಕಟ್ಟಡ ಕಾರ್ಮಿಕರಿಗೆ ನೇರವಾಗಿ ಸವಲತ್ತುಗಳ ಮೂಲ ಹಣವನ್ನು ಅವರ ಬ್ಯಾಂಕ್ ಉಳಿತಾಯ ಖಾತೆಗೆ ಜಮೆ ಮಾಡಬೇಕು, ಇಲ್ಲವಾದಲ್ಲಿ ರಾಜ್ಯದಲ್ಲಿ ಇರುವ ಎಲ್ಲಾ ಕಾರ್ಮಿಕ ಸಂಘಟನೆಗಳು ಜೊತೆಗೂಡಿ ಉಗ್ರ ಹೋರಾಟ ಮಾಡಬೇಕಾಗುತ್ತದೆ,
ಜೊತೆಗೆ ಪ್ರಮುಖ ಸಾಕ್ಷಾಧಾರಗಳನ್ನು ಇಟ್ಟುಕೊಂಡು ನ್ಯಾಯಾಲಯದ ಮೊರೆ ಹೋಗಲು ತಯಾರಿ ಮಾಡಿಕೊಂಡಿದ್ದು, ಕಟ್ಟಡ ಕಾರ್ಮಿಕರ ಹಿತಾಸಕ್ತಿಗಾಗಿ ನಮ್ಮ ಬೇಡಿಕೆಗಳು ಈಡೇರಿಸದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದೊಂದೇ ಪರಿಹಾರವಾಗಿರುತ್ತದೆ, ತಾವುಗಳು ನಮ್ಮ ಬೇಡಿಕೆಗಳಿಗೆ ಗಮನಕೊಟ್ಟು ಬೇಡಿಕೆಗಳನ್ನು ಈಡೇರಿಸಿ ರಾಜ್ಯದ ಕಟ್ಟಡ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಎಂಬುದಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿರಿಗನ್ನಡನಾಡು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷರಾದ ನರಸಿಂಹಮೂರ್ತಿ, ಅಧ್ಯಕ್ಷರಾದ ಸೈಯದ್ ಜಬ್ಬರ್, ಉಪಾಧ್ಯಕ್ಷರಾದ ಜಿ.ಎ.ಕರಿಯಣ್ಣ, ಖಜಾಂಚಿ ಜೋಸೆಫ್ ಹಾಡ್ಸನ್, ಪ್ರಧಾನ ಕಾರ್ಯದರ್ಶಿ ಎಸ್.ಮುಕುಂದ, ಸಂಘಟನಾ ಕಾರ್ಯದರ್ಶಿ ಕೆ.ನಾಗರಾಜು, ಸಂಚಾಲಕರಾದ ಸೈಯದ್ ಸದ್ದಾಮ್, ಕಾರ್ಯಕಾರಣಿ ಸದಸ್ಯರಾದ ಅಫ್ಜಲ್ ಖಾನ್, ಕಾರ್ಯಕಾರಣಿ ಸದಸ್ಯರುಗಳಾದ ಓ.ಪ್ರಸನ್ನ, ಹಬೀಬ್, ಸುಭಾನ್ ಸಾಬ್, ಆರ್.ಕರಿಯಪ್ಪ, ಆವೇದಕರುಗಳಾದ ಜಿ.ಟಿ.ಹನುಮಂತಪ್ಪ, ಉಮಾಪತಿ, ತಿಪ್ಪೇಸ್ವಾಮಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
