
ಹಿರಿಯೂರು :
ಮಕ್ಕಳು ತಮ್ಮ ಬೇಸಿಗೆ ರಜಾ ದಿನಗಳಲ್ಲಿ ವ್ಯರ್ಥವಾಗಿ ಕಾಲಕಳೆಯದೇ, ಕರಕುಶಲತೆ, ಡ್ರಾಯಿಂಗ್, ಸಂಗೀತ, ಕ್ರೀಡೆಗಳು ಸಹಪಠ್ಯ ಚಟುವಟಿಗೆಗಳನ್ನು ಕಲಿಸುವಂತಹ ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ನಿಮ್ಮಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಎಂಬುದಾಗಿ ಡಾ.ಮಂಜುಳಾಗುರುಮೂರ್ತಿ ಹೇಳಿದರು.
ನಗರದ ಶ್ರೀಶೈಲ ರಸ್ತೆಯಲ್ಲಿರುವ ಶ್ರೀಮತಿ ಶಶಿಪ್ರಕಾಶ್ ರವರ ಮನೆಯ ಮೇಲೆ ಹಮ್ಮಿಕೊಳ್ಳಲಾಗಿದ್ದ ಕಲಾಕುಂಚ ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದ ಅವರು ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸಿ ನಿಮ್ಮಗಳ ಬುದ್ಧಿಶಕ್ತಿಯನ್ನು ಹೆಚ್ಚಿಸಿಕೊಂಡು ಪೋಷಕರು ತಮ್ಮ ಮಕ್ಕಳನ್ನು ಇಂತಹ ಬೇಸಿಗೆ ಶಿಬಿರಗಳಿಗೆ ಕಳುಹಿಸುವುದರಿಂದ ಮಕ್ಕಳಲ್ಲಿ ಹೆಚ್ಚು ಬುದ್ಧಿವಂತಿಕೆ, ಜ್ಞಾನ, ಏಕಾಗ್ರತೆಯನ್ನು ಹೆಚ್ಚಾಗುತ್ತದೆ, ಅಲ್ಲದೆ ಬೇಸಿಗೆಶಿಬಿರಗಳಲ್ಲಿ ಭಾಗಿವಹಿಸುವುದರಿಂದ ಮಕ್ಕಳ ಮಾನಸಿಕ ಒತ್ತಡ ಕಡಿಮೆಯಾಗಿ, ಸೃಜನಶೀಲತೆಯನ್ನು ಮೈಗೂಡಿಸಿಕೊಳ್ಳುತ್ತಾರೆ ಎಂಬುದಾಗಿ ಹೇಳಿದರು.
ಕಲಾಕುಂಚ ಬೇಸಿಗೆ ಶಿಬಿರದ ನಿರ್ವಾಹಕರಾದ ಶಶಿಪ್ರಕಾಶ್ ಮಾತನಾಡಿ, ಬೇಸಿಗೆ ಶಿಬಿರದಲ್ಲಿ ಲಲಿತ ಕಲೆಗಳಿಂದ ಮಕ್ಕಳಲ್ಲಿ ಹೆಚ್ಚಿನ ಸಹಕಾರವಾಗಲಿದೆ, ಡ್ರಾಯಿಂಗ್ ನಿಂದಾಗಿ ಮಕ್ಕಳ ಏಕಾಗ್ರತೆ ಹೆಚ್ಚುತ್ತದೆ, ಬರವಣಿಗೆಯಲ್ಲಿ ಸುಧಾರಣೆಯಾಗುತ್ತದೆ, ಕ್ರೀಡೆಗಳು ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ, ಸಂಗೀತ ಮಕ್ಕಳ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಎಂಬುದಾಗಿ ಹೇಳಿದರು.
ಕಲಾವಿದರಾದ ರಾಜೀವ್ ಮಾತನಾಡಿ, ಪೋಷಕರಿಗೆ ತಮ್ಮ ಮಕ್ಕಳು ವಿದ್ಯಾವಂತರಾಗಿ ಒಳ್ಳೆ ಹುದ್ದೆ ಹೊಂದಿ ದುಡಿಯುವಂತಾಗಬೇಕೆಂಬ ಆಸೆಗಳು ಇರುತ್ತವೆ. ಈ ನಿಟ್ಟಿನಲ್ಲಿ ಪೋಷಕರು ನಿಮ್ಮ ಮಕ್ಕಳನ್ನು ಕಲಾಕುಂಚದಂತಹ ಬೇಸಿಗೆಶಿಬಿರಗಳಲ್ಲಿ ಭಾಗವಹಿಸುವಂತೆ ಮಾಡಿ, ವಿವಿಧ ಕಲೆಗಳನ್ನು ತಮ್ಮಲ್ಲಿ ಕರಗತಮಾಡಿಕೊಳ್ಳಲು ಪ್ರೋತ್ಸಾಹಿಸಬೇಕು ಎಂಬುದಾಗಿ ಹೇಳಿದರು.
ಶಿಕ್ಷಕಿ ಸ್ವಾತಿಕುಮಾರ್ ಮಾತನಾಡಿ, ಈ ಶಿಬಿರದಲ್ಲಿ ಮಕ್ಕಳಿಗೆ ಭಗವದ್ಗೀತೆಯನ್ನು ಹೇಳಿಕೊಡುವ ಜೊತೆಗೆ ಭಗವದ್ಗೀತೆಯ ಅರ್ಥವನ್ನು ತಿಳಿಸಿಕೊಡಲಾಗುವುದು, ಭಗವದ್ಗೀತೆಯನ್ನು ಮಕ್ಕಳು ಕಲಿಯುವುದರಿಂದ ಮಕ್ಕಳಲ್ಲಿ ಧಾರ್ಮಿಕ ಮನೋಭಾವ ಬೆಳೆಯುವ ಜೊತೆಗೆ ಉತ್ತಮ ಸಂಸ್ಕಾರವನ್ನು ತಮ್ಮಲ್ಲಿ ಮೈಗೂಡಿಸಿಕೊಳ್ಳುತ್ತಾರೆ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಡಾ.ಮಂಜುಳಾಗುರುಮೂರ್ತಿ, ಕಲಾಕುಂಚ ಬೇಸಿಗೆ ಶಿಬಿರದ ನಿರ್ವಾಹಕರಾದ ಶಶಿಪ್ರಕಾಶ್, ಕಲಾವಿದರಾದ ರಾಜೀವ್, ಶಿಕ್ಷಕಿ ಸ್ವಾತಿಕುಮಾರ್, ಸರ್ಕಾರಿ ವಕೀಲರಾದ ದೀಪ್ತಿ, ವರುಣ್, ವಿದ್ಯಾ, ರಾಧಮ್ಮ, ಗಾಯಿತ್ರಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
