
ಹಿರಿಯೂರು:
ರಾಜ್ಯದ ತಿಗಳ ಸಮುದಾಯದವರು ತಮ್ಮ ಮೂಲಪುರುಷರಾದಂತಹ ಅಗ್ನಿಬನ್ನಿರಾಯ ಸ್ವಾಮಿಯವರನ್ನು ತಿಗಳ ಕ್ಷತ್ರಿಯ ಸಮಾಜದ ಆರಾಧ್ಯ ದೈವವೆಂದೇ ಭಾವಿಸಿದ್ದಾರೆ ಎಂಬುದಾಗಿ ಉಪ ತಹಶೀಲ್ದಾರರಾದ ಕೆ.ಬಿ.ತಿಪ್ಪೇಸ್ವಾಮಿ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ “ಅಗ್ನಿ ಬನ್ನಿರಾಯರ” ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಅಗ್ನಿಯನ್ನೇ ಮೂಲವಾಗಿ ನಂಬಿ, 14 ಪಂಗಡಗಳನ್ನು ಒಗ್ಗೂಡಿಸಿ ಆರಾಧಿಸುವ ಈ ಸಮಾಜವು ಬನ್ನಿರಾಯನನ್ನು ವೀರ ಪುರುಷರನ್ನಾಗಿ ಪೂಜಿಸುತ್ತದೆ. ತಿಗಳ ಕ್ಷತ್ರಿಯ ಸಮಾಜದವರು ಪ್ರಮುಖವಾಗಿ ಹೂವು ಮತ್ತು ತರಕಾರಿ ಕೃಷಿಯಲ್ಲಿ ನಿರತರಾದವರು. ಅಗ್ನಿಬನ್ನಿರಾಯ ಸ್ವಾಮಿ ಸಮುದಾಯದ ಏಕತೆ ಮತ್ತು ವೀರ ಪರಂಪರೆಯ ಸಂಕೇತವಾಗಿದ್ದಾರೆ’ ಎಂದು ತಿಳಿಸಿದರು.
ಈ ಸಮಾರಂಭದಲ್ಲಿ ಬಿಇಒ ಕಚೇರಿಯ ರವೀಂದ್ರನಾಯ್ಕ್, ಭೂದಾಖಲೆಗಳ ಸಹಾಯಕ ನಿರ್ದೇಶಕ ಲಕ್ಷ್ಮೀನರಸಿಂಹಯ್ಯ, ರಾಜಸ್ವ ನಿರೀಕ್ಷಕರಾದ ವರದರಾಜು, ಗ್ರಾಮ ಆಡಳಿತಾಧಿಕಾರಿ ವಾಣಿ, ನಗರ ಠಾಣೆಯ ಚಂದ್ರನಾಯ್ಕ, ತಾಲ್ಲೂಕು ಕಚೇರಿಯ ಶ್ರೀನಿವಾಸರೆಡ್ಡಿ, ಎಸ್.ಎನ್.ಮಂಜುನಾಥ್, ಶಶಿಕುಮಾರ್, ಶ್ರೀಧರ್, ರಮ್ಯಾ, ಮಂಜುಳಾ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
