
ಚಿತ್ರದುರ್ಗ…
ಚಿತ್ರದುರ್ಗ ನಗರದ ಪ್ರವೇಶ ದ್ವಾರದಲ್ಲಿರುವ ಸರ್ಕಾರಿ ವಿಜ್ಞಾನ ಕಾಲೇಜು ಚಿತ್ರದುರ್ಗದ ಹೆಮ್ಮೆಯ ಪ್ರದೇಶ. ಈ ಕಾಲೇಜಿನಲ್ಲಿ ಓದಿರುವವರು ಪ್ರೊಫೆಸರ್ ಗಳು ವಿಜ್ಞಾನಿಗಳು ವೈದ್ಯರು ಸಾಮಾಜಿಕ ಕಾರ್ಯಕರ್ತರು ಆಗಿರುತ್ತಾರೆ. ಇದು ಈ ನಗರಕ್ಕೆ ಒಂದು ಶೋಭೆ ತರುವ ವಿದ್ಯಾಸಂಸ್ಥೆಯಾಗಿದೆ, ಆದರೆ ಸರ್ಕಾರಿ ಮಹಿಳಾ ವಿಜ್ಞಾನ ಪದವಿ ಕಾಲೇಜು ನಿರ್ಮಿಸಲು 200ಕ್ಕೂ ಹೆಚ್ಚು ಮರಗಳಿರುವ ಪ್ರವೇಶದ್ವಾರವನ್ನು ಆಯ್ಕೆ ಮಾಡಿಕೊಂಡಿರುವುದು ನಿಜಕ್ಕೂ ವಿಷಾಧನೀಯ ಸಂಗತಿ ಎಂಬುದಾಗಿ ರೈನ್ ಟ್ರಸ್ಟ್ ಅಧ್ಯಕ್ಷರಾದ ಕಸವನಹಳ್ಳಿ ರಮೇಶ್ ಬೇಸರ ವ್ಯಕ್ತಪಡಿಸಿದರು.
ಇತ್ತೀಚೆಗೆ ಈ ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರವೇಶ ದ್ವಾರದಲ್ಲಿರುವ ಚಿತ್ರದುರ್ಗದ ರಿ. ಸ. ನಂಬರ್ 120/2 ರಲ್ಲಿ ಎರಡು ಎಕರೆ 24 ಗುಂಟೆ ಪ್ರದೇಶವನ್ನು ಸರ್ಕಾರಿ ಮಹಿಳಾ ವಿಜ್ಞಾನ ಪದವಿ ಕಾಲೇಜಿಗೆ 2021ರ ಸಪ್ಟೆಂಬರ್ 20ರಂದು ಮಂಜೂರು ಮಾಡಿಕೊಟ್ಟಿದ್ದು, ಅದರಲ್ಲಿ ನೆರಳಾಗಿ ಮಕ್ಕಳಿಗೆ ಓದಿಕೊಳ್ಳಲು ಆಸರೆಯಾಗಿ ಹಿರಿಯರಿಗೆ ಪರಿಸರ ಪ್ರಿಯರಿಗೆ ಶೋಭೆ ತರುವ ಈ ಜಾಗದಲ್ಲಿ ಸುಮಾರು 200ಕ್ಕೂ ಹೆಚ್ಚು ಬೆಳೆದು ನಿಂತಿರುವ ಮರ-ಗಿಡಗಳು ಇರುತ್ತವೆ.
ಕಟ್ಟಡ ಕಟ್ಟಬೇಕೆಂದರೆ ಈ ಮರಗಳನ್ನು ಕಡಿಯಲೇಬೇಕೆಂದು ಕಾನೂನು ಇರುವುದಿಲ್ಲ. ಬೇರೆ ಕಡೆ ಇರುವ ಖಾಲಿ ಜಾಗದಲ್ಲಿಯೂ ಕಟ್ಟಡ ನಿರ್ಮಿಸಬಹುದು. ಈ ಭಾಗದಲ್ಲಿ ಇದರಿಂದ ಜನರ ಆರೋಗ್ಯದ ಮೇಲೆ ಸಕಾರಾತ್ಮಕ ಚಿಂತನೆಗಳು ಹುಟ್ಟುತ್ತವೆ. ಚಿತ್ರದುರ್ಗದಲ್ಲಿ ಅಭಿವೃದ್ಧಿ ಮಾಡಲು ಕಾಲೇಜು ಕಟ್ಟಲು ಬಹಳಷ್ಟು ಜಾಗ ಬೇರೆ ಕಡೆ ಇದೆ. ಆದರೆ ಅದನ್ನೆಲ್ಲ ಬಿಟ್ಟು ಪ್ರವೇಶ ದ್ವಾರದ 200ಕ್ಕೂ ಹೆಚ್ಚು ಮರಗಳಿರುವ ಇದೇ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿರುವುದು ಪರಿಸರ ಪ್ರೇಮಿಗಳಿಗೆ ನೋವುಂಟುಮಾಡಿದೆ.

ನಗರದ ಸಂಘ- ಸಂಸ್ಥೆಗಳು, ಪರಿಸರಸಕ್ತರು, ವಿದ್ಯಾರ್ಥಿಗಳು ,ಶಿಕ್ಷಕರು ವಿರೋಧ ಮಾಡಿದರು ಸಹ ಲೆಕ್ಕಿಸದೆ ಕಟ್ಟಡ ಕಟ್ಟಲು ಮುಂದಾಗಿರುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆ ಆಗಿರುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರಾದ ಸುಧಾಕರ್ ಅವರು, ಎಲ್ಲಾ ಶಾಸಕರು ಹಾಗೂ ಸಂಸದರು ಧ್ವನಿ ಎತ್ತಬೇಕು. ಈ ಜಾಗವನ್ನು ಉಳಿಸಿಕೊಡಬೇಕು ಎಂಬುದಾಗಿ ಕಸವನಹಳ್ಳಿರಮೇಶ್ ರವರು ಮನವಿ ಮಾಡಿದರು.
ಪ್ರವೇಶ ದ್ವಾರದ 200ಕ್ಕೂ ಹೆಚ್ಚು ಮರಗಳಿರುವ ಜಾಗದಲ್ಲಿ ಕಾಲೇಜಿನ ಕಟ್ಟಡ ಕಟ್ಟುವ ಕಾರ್ಯ ನಿಲ್ಲಿಸಬೇಕು, ಹಾಗೊಂದು ವೇಳೆ ಅಭಿವೃದ್ಧಿಗಾಗಿ ಇದೇ ಜಾಗದಲ್ಲಿ ಕಟ್ಟಡವನ್ನು ಕಟ್ಟುತ್ತೇವೆ ಎಂದರೆ ನಾವು ಸಹ ನಗರದ ಸಂಘ-ಸಂಸ್ಥೆಗಳೊಂದಿಗೆ, ಪರಿಸರಪ್ರೇಮಿಗಳೊಂದಿಗೆ ಒಟ್ಟಾಗಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂಬುದಾಗಿ ಕಸವನಹಳ್ಳಿ ರಮೇಶ್ ಅವರು ಎಚ್ಚರಿಸಿದರು. ಈ ಸಂದರ್ಭದಲ್ಲಿ ರೈನ್ ಟ್ರಸ್ಟ್ ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ್ ಕಳ್ಳಿಹಟ್ಟಿ ಸಹ ಉಪಸ್ಥಿತರಿದ್ದರು.
