April 14, 2026
07

ಹಿರಿಯೂರು :    

ನಗರದ ನಿವಾಸಿಗಳಿಗೆ ನೀರಿನ ಅಭಾವವಿಲ್ಲ, ನಗರದ 136 ಕೊಳವೆ ಬಾವಿಗಳು ಕಾರ್ಯನಿರ್ವಹಣೆ ಮಾಡಲಾಗುತ್ತಿದ್ದು,ಸುಮಾರು 24 ಕೋಟಿ ರೂ ವೆಚ್ಚದಲ್ಲಿ ನೂತನ ಪೈಪ್ ಲೈನ್ ಕಾಮಗಾರಿ ಮಾಡಲಾಗುತ್ತಿದೆ, ಆದ್ದರಿಂದ ನಗರದ ನಿವಾಸಿಗಳು ಬಿರುಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುತ್ತದೆ ಎಂದು ಯಾವುದೇ ರೀತಿಯ ಭಯ ಪಡುವ ಅವಶ್ಯಕತೆಯಿಲ್ಲ ಎಂಬುದಾಗಿ ನಗರಸಭೆ ಪೌರಾಯುಕ್ತರಾದ ವಾಸೀಂರವರು ತಿಳಿಸಿದ್ದಾರೆ.

ಈಗಾಗಲೇ ಗ್ರಾಮೀಣ ಭಾಗಗಳಲ್ಲಿ ಕೆಲವು ಕಡೆ ಕುಡಿಯುವ ನೀರಿನ ಸಂಪರ್ಕ ಪೂರೈಕೆಯ ಬೇಡಿಕೆ ಕೇಳಿ ಬರುತ್ತಿದೆ, ಬಿಸಿಲು ಏರುತ್ತಿರುವ ಈ ಹೊತ್ತಲ್ಲಿ 84 ಸಾವಿರ ಜನಸಂಖ್ಯೆ ಇರುವ ಹಿರಿಯೂರು ನಗರದಲ್ಲಿ ಕುಡಿಯುವ ನೀರಿನ ಭವಣೆ ಆಗದಂತೆ ನಗರಸಭೆ ಆಡಳಿತ ಮುನ್ನೆಚ್ಚರಿಕೆ ವಹಿಸಿದೆ ನಗರದ 31 ವಾರ್ಡ್ ಗಳಲ್ಲೂ ಸದಸ್ಯರ ಅವಧಿ ಮುಗಿದಿದ್ದು, ಇದೀಗ ಅಧಿಕಾರಿಗಳು ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಆಹಾಕಾರವಾಗದಂತೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ.

ನಗರದ ಎಲ್ಲಾ ವಾರ್ಡ್ ಗಳಲ್ಲಿ ಯಾವುದೇ ರೀತಿಯ ಕುಡಿಯುವ ನೀರಿನ ತೊಂದರೆ ಇಲ್ಲ ಎನ್ನಲಾಗಿದೆ, ಬೋರ್ವೆಲ್ ಗಳಿಂದ ಪ್ರತಿದಿನ ಎರಡುವರೆ ಎಂ ಎಲ್ ಡಿ ನೀರು ಬರುತ್ತಿದೆ, ವಿವಿ ಸಾಗರದಿಂದ ಪ್ರತಿದಿನವೂ 10 ಎಂ ಎಲ್ ಡಿ ನೀರು ಲಕ್ಕವನಹಳ್ಳಿ ಬಳಿಯ ಜಲ ಶುದ್ಧೀಕರಣ ಘಟಕಕ್ಕೆ ಬರುತ್ತದೆ, ಅಲ್ಲಿಂದ ನೀರು ಶುದ್ಧೀಕರಣಗೊಂಡು ವಾರ್ಡ್ ಗಳಿಗೆ ತಲುಪುತ್ತಿದೆ. ಮೊದಲ ಮೂರು ದಿನಕ್ಕೊಮ್ಮೆ ನೀರು ಬಿಡುತ್ತಿದ್ದು ಇದೀಗ ಸಾಕಷ್ಟು ನೀರಿನ ಅನುಕೂಲವಾಗಿರುವುದರಿಂದ ವಾರಕ್ಕೆ ಮೂರು ನಾಲ್ಕು ಬಾರಿ ಕುಡಿಯುವ ನೀರು ಒದಗಿಸಲಾಗುತ್ತಿದೆ.

ವಾಣಿವಿಲಾಸ ಸಾಗರ ಜಲಾಶಯ ಬರ್ತಿಯಾದ ಮೇಲೆ ಅಂತರ್ಜಲ ವೃದ್ಧಿಯಾಗಿದ್ದು ನಗರ ಭಾಗದ ಎಲ್ಲಾ 136 ಕೊಳವೆ ಬಾವಿಗಳು ಕಾರ್ಯನಿರ್ವಹಿಸುತ್ತಿದೆ, ಬೋರ್ವೆಲ್ ಗಳೆಲ್ಲ ರಿಚಾರ್ಜ್ ಆಗಿರುವುದು ನೀರಿನ ಸಮಸ್ಯೆ ಅಷ್ಟಾಗಿ ಕಾಡುತ್ತಿಲ್ಲ, ನೆಲದಡಿಯ ಪೈಪ್ ಲೈನ್ ಗಳೆಲ್ಲ ಚೆನ್ನಾಗಿದ್ದು ಎಲ್ಲಾದರೂ ಪೈಪ್ ಒಡೆದರೆ, ಸೋರಿಕೆಯಾದರೆ ಮಾತ್ರ ಆಗ ಒಂದು ದಿನ ನೀರಿನ ವ್ಯತ್ಯಾಸವಾಗುತ್ತದೆಯೇ ಹೊರತು ನಗರದ ಭಾಗದಲ್ಲಿ ಉಳಿದಂತೆ ನೀರಿನ ಕೊರತೆಯಾಗಿಲ್ಲ.

ಇದೀಗ ಕ್ಷೇತ್ರದ ಸಚಿವರಾದ ಡಿ.ಸುಧಾಕರ್ ಅವರ ಕಾಳಜಿಯಿಂದಾಗಿ ಅಮೃತ್ ಸ್ಕೀಮ್ ನಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರು 24 ಕೋಟಿ ವೆಚ್ಚದಲ್ಲಿ ನಗರದಲ್ಲಿ ಹೊಸದಾಗಿ ಪೈಪ್ ಲೈನ್ ಕಾಮಗಾರಿ ಮಾಡುತ್ತಿದ್ದಾರೆ, ನಗರ ಭಾಗದಲ್ಲಿ 10 ಲಕ್ಷ ಲೀಟರ್ ನ ಆರು ಟ್ಯಾಂಕ್ ಹಾಗೂ ಐದು ಲಕ್ಷ ಲೀಟರ್ ನ 4 ಟ್ಯಾಂಕ್ ಗಳಿವೆ. ಮೂರು ದಿನಗಳಿಗೊಮ್ಮೆ ನೀರಿನ ಪರೀಕ್ಷೆ ಮಾಡಲಾಗುತ್ತಿದ್ದು, ಶುದ್ಧ ನೀರು ನೀಡುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಪ್ರತಿಸಲ ನೀರಿನ ಪರೀಕ್ಷೆಯನ್ನು ಬೇರೆ ಬೇರೆ ಏರಿಯಾಗಳಲ್ಲಿ ನಡೆಸುತ್ತಿರುವುದರಿಂದ ಎಲ್ಲಾ ಕಡೆಯ ನೀರು ಸಹ ಪರೀಕ್ಷೆಗೆ ಒಳಪಡುತ್ತಿದೆ, ಜಲ ಶುದ್ಧೀಕರಣ ಘಟಕದಲ್ಲಿ ಜಲ ಶುದ್ಧೀಕರಣಕ್ಕೆ ಬೇಕಾದ ಎಲ್ಲಾ ರೀತಿಯ ಪೌಡರ್ ಗಳ ಸ್ಟಾಕ್ ಇದ್ದು, ಅಲ್ಲೂ ಯಾವುದೇ ರೀತಿಯ ಕೊರತೆ ಇಲ್ಲ, ಈಗಾಗಲೇ ನಗರ ಭಾಗದಲ್ಲಿ ಎಲ್ಲಾ ಕಡೆಯೂ ಕುಡಿಯುವ ನೀರಿನ ಪೈಪ್ ಲೈನ್ ಇದ್ದು, ಹೊಸದಾಗಿ ಬಡಾವಣೆಗಳು ಆಗುವ ಕಡೆಯೂ ನೀರಿನ ಪೈಪ್ ಲೈನ್ ಮಾಡಲಾಗುತ್ತಿದೆ.

ನಗರ ವ್ಯಾಪ್ತಿಯಲ್ಲಿ 5950 ಮನೆ ನಲ್ಲಿಗಳಿದ್ದು, 37 ವಾಣಿಜ್ಯ ನಲ್ಲಿಗಳಿವೆ ಅನಧಿಕೃತ ನಲ್ಲಿ ಗಳ ಸಂಪರ್ಕವು ಕಡಿವಾಣ ಹಾಕಲಾಗುತ್ತಿದ್ದು ಅವುಗಳನ್ನು ಗುರುತಿಸಿ,ಸಂಪರ್ಕ ಕಡಿತಗೊಳಿಸಲಾಗುತ್ತಿದೆ,

ವಾಟರ್ ಸಪ್ಲೈ ವಿಭಾಗದಲ್ಲಿ ಗುತ್ತಿಗೆ ನೌಕರರು ಸೇರಿದಂತೆ ಒಟ್ಟು 26 ನೌಕರರು ಕೆಲಸ ಮಾಡುತ್ತಿದ್ದಾರೆ ಇದೆಲ್ಲದರ ಜೊತೆಗೆ ನಗರ ಭಾಗದಲ್ಲಿ ಖಾಸಗಿಯಾಗಿ ನೀರು ವಿತರಿಸುವವರಿಗೆ ನೋಟೀಸ್ ಗಳನ್ನು ನೀಡಿ ಶುದ್ಧ ಕುಡಿಯುವ ನೀರು ಮಾರಾಟ ಮಾಡಲು ಸೂಚಿಸಲಾಗಿದೆ ಎಂಬುದಾಗಿ ಪೌರಾಯುಕ್ತರಾದ ವಾಸೀಂ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

About The Author

Leave a Reply

Your email address will not be published. Required fields are marked *