
ಹಿರಿಯೂರು :
ಬೆಸ್ಕಾಂ ಇಲಾಖೆಯಿಂದ ರೈತರಿಗೆ ಕೊಡುತ್ತಿರುವ ದುರಸ್ತಿಯಾದ ಪರಿವರ್ತಕಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ವಿತರಿಸಿದ ಒಂದು ದಿನದೊಳಗೆ ಸುಟ್ಟು ಹೋಗುತ್ತಿರುವ ವರದಿಗಳು ಹಾಗೂ ಆಯಿಲ್ ಲೀಕೇಜ್ ಆಗಿ ಸುಟ್ಟು ಹೋಗುತ್ತಿರುವ ವರದಿಗಳು ರೈತರಿಂದ ಕೇಳಿ ಬಂದಿದ್ದು, ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಈ ಕೂಡಲೇ ಸರಿಪಡಿಸಬೇಕು ಎಂಬುದಾಗಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕಾತ್ರಿಕೇನಹಳ್ಳಿ ಹೇಳಿದರು.
ನಗರದ ಭಾರತೀಯ ಕಿಸಾನ್ ಸಂಘದಿಂದ ಬೆಸ್ಕಾಂ ಇಲಾಖೆ ಮುಂದೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ನಂತರ ಅವರು ಮಾತನಾಡಿದರು.
ಆಕ್ರಮ ಸಕ್ರಮದ ಬಗ್ಗೆ ಸರ್ಕಾರ ಗಡುವು ನೀಡಿರುವುದರ ವಿರುದ್ಧ ನೀವು ತೆಗೆದುಕೊಂಡಿರುವ ನಿರ್ಧಾರವನ್ನು ಕೂಡಲೇ ಹಿಂತೆಗೆದುಕೊಂಡು ರೈತರಿಗೆ ಸಮಸ್ಯೆಯಾಗದ ರೀತಿ ವಿದ್ಯುತ್ ಒದಗಿಸುವ ನಿಟ್ಟಿನಲ್ಲಿ ಅಕ್ರಮ ಸಕ್ರಮ ಯೋಜನೆಯನ್ನು ಮರು ಜಾರಿ ಮಾಡುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲು ಒತ್ತಡ ತರಬೇಕು ಎಂದರಲ್ಲದೆ,
ಹಲವಾರು ರೈತರು ಸಂಘಟನೆ ಮುಖಂಡರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಭಾರತೀಯ ಕಿಸಾನ್ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ರೈತರ ಜೊತೆಗೂಡಿ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಖಡಕ್ಕಾಗಿ ಸೂಚನೆ ನೀಡಲಾಗುತ್ತಿದ್ದು, ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಉಗ್ರಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂಬುದಾಗಿ ಎಚ್ಚರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಯುವಘಟಕದ ತಾಲ್ಲೂಕು ಅಧ್ಯಕ್ಷ ಚೇತನ್ ಯಳನಾಡು ಮಾತನಾಡಿ, 72 ಗಂಟೆಯೊಳಗೆ ಸುಟ್ಟು ಹೋದ ಪರಿವರ್ತಕವನ್ನು ಬದಲಾಯಿಸಿಕೊಡುವ ಆದೇಶವಿದ್ದರೂ ಕೂಡ ನೀವು ಅದನ್ನು ಗಾಳಿಗೆ ತೂರಿ ಆಯಿಲ್ ಬಂದಿಲ್ಲ ದುರಸ್ಥಿಯಾದ ಪರಿವರ್ತಕ ಗಳು ಸ್ಟಾಕ್ ಇಲ್ಲವೆಂದು ಸಬೂಬು ಹೇಳಿಕೊಂಡು ರೈತರನ್ನು ಇಲಾಖೆಯ ಮುಂದೆ ಅಲೆದಾಡುಸುತ್ತಿರುವ ವಿಚಾರ ಕಂಡು ಬಂದಿರುತ್ತದೆ.
ದೂರದ ಮೊಳಕಾಲ್ಮೂರು, ತಳುಕು, ಚಳ್ಳಕೆರೆಯಿಂದ ರೈತರು ಬಂದು ಅಧಿಕಾರಿಗಳ ಹತ್ತಿರ ಅಲೆದು ಸಾಕಾಗಿ ಕೊನೆಗೆ ಊಟವಿಲ್ಲದೆ ಮರದಡಿ ಮಲಗಿಕೊಂಡಿರುತ್ತಾರೆ. ದುರಸ್ಥಿಯಾದ ಪರಿವರ್ತಕಗಳು ಎಲ್.ಟಿ. ಲೈನ್ ಚಾರ್ಜ್ ಆಗದೆ ಸುಟ್ಟು ಹೋಗಿರುವ ವರದಿಗಳಿವೆ. ಈ ವಿಚಾರವನ್ನು ನೀವು ಮನಗಂಡು ಈ ರೀತಿ ಕಳಪೆ ಪರಿವರ್ತಕಗಳನ್ನು ದುರಸ್ಥಿ ಮಾಡಿ ಕೊಡುವ ಕಂಪನಿ ಮಾಲೀಕರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು,
ಬದಲಾಗಿ ರೈತರು ಅಕ್ರಮವಾಗಿ ಅಳವಡಿಸಿಕೊಂಡಿರುತ್ತಾರೆ ಎಂದು ಸಬೂಬು ಹೇಳಿ ರೈತರಿಗೆ ಪರಿವರ್ತಕಗಳನ್ನು ಕೊಡುವ ವಿಚಾರವಾಗಿ ವಿಳಂಬ ನೀತಿ ತೋರಿಸುತ್ತಿರುವುದೇಕೆ ಹಾಗೆಯೇ ಇಷ್ಟು ದಿನ ಸುಟ್ಟು ಹೋಗದೆ ಇರುವ ಪರಿವರ್ತಕಗಳು ಈಗ ಸುಡುತ್ತಿರುವುದಕ್ಕೆ ಕಳಪೆ ಗುಣಮಟ್ಟದಿಂದ ಕೂಡಿರುವುದು ಕಂಡು ಬರುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ಈ ವಿಚಾರವಾಗಿ ಇಲಾಖೆಯವರು ಈ ರೀತಿ ಕಳಪೆ ಪರಿವರ್ತಕ ದುರಸ್ಥಿ ಮಾಡುವವರ ವಿರುದ್ಧ ಕ್ರಮ ಕೈಗೊಂಡು ರೈತರಿಗೆ ಗುಣಮಟ್ಟದ ವಿದ್ಯುತ್ ನೀಡಿ ಸಮಸ್ಯೆಗಳನ್ನು ಈಡೇರಿಸಬೇಕು ಇಲ್ಲವಾದಲ್ಲಿ ಬೆಸ್ಕಾಂ ಇಲಾಖೆಯ ವಿರುದ್ಧ ದೊಡ್ಡಮಟ್ಟದಲ್ಲಿ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಅಧ್ಯಕ್ಷ ಗಡಾರಿಕೃಷ್ಣಪ್ಪ, ಕಾರ್ಯದರ್ಶಿ ಚಂದ್ರಗಿರಿ, ಸಹ ಕಾರ್ಯದರ್ಶಿ ಜಯಪ್ರಕಾಶ್.ಕೆ.ಕೆ.ಹಟ್ಟಿ, ಸಿ.ಐ.ಟಿ.ಯು ತಾಲ್ಲೂಕು ಅಧ್ಯಕ್ಷರಾದ ನಿಂಗಮ್ಮ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ನಿಂಗಣ್ಣ ಪಿಲಾಜನಹಳ್ಳಿ, ವಿಶ್ವನಾಥ್, ರಾಕೇಶ್, ಕಾರ್ತಿಕ್, ಭೈರೇಶ್, ಗಿರೀಶ್,ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.
