
ಹಿರಿಯೂರು:
ತಾಲೂಕಿನ ಧರ್ಮಪುರ ಭಾಗದ ವಿವಿಧ ಗ್ರಾಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವು ಕಡೆ ಹರಡಿರುವ ಜೂಜಾಟದ ಪಿಡುಗು ಮತ್ತು ಅಕ್ರಮ ಬಡ್ಡಿ ಸಾಲದ ಕಿರುಕುಳದಿಂದ ಕಂಗೆಟ್ಟಿರುವ ಕುಟುಂಬಗಳನ್ನು ಸಂರಕ್ಷಿಸಲು ಅಬ್ಬಿನಹೊಳೆ ಗ್ರಾಮಾಂತರ ಪೊಲೀಸ್ ಠಾಣೆಯ “ಪಿ.ಎಸ್.ಐ ದೇವರಾಜ್’ ಅವರು ವಿಶೇಷ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ಭಾಗದ ಅನೇಕ ಗ್ರಾಮಸ್ಥರು ವಿವಿಧ ಸ್ತ್ರೀಶಕ್ತಿ ಸಂಘಗಳು ಹಾಗೂ ಮಂಜುನಾಥ ಸಂಘದಿಂದ ಕುಟುಂಬದ ಅಭಿವೃದ್ಧಿಗಾಗಿ ಪಡೆದ ಸಾಲದ ಹಣವನ್ನು ಜೂಜಾಟಕ್ಕೆ ವ್ಯಯಿಸುತ್ತಿರುವುದು ಬೆಳಕಿಗೆ ಬಂದಿದ್ದು, ಇದರಿಂದಾಗಿ ಅನೇಕ ಕುಟುಂಬಗಳು ಆರ್ಥಿಕವಾಗಿ ಬೀದಿಗೆ ಬರುವಂತಾಗಿದೆ ಮತ್ತು ಸಾಲ ತೀರಿಸಲಾಗದೆ ಅಕ್ರಮ ಬಡ್ಡಿ ದಂಧೆಕೋರರ ಒತ್ತಡಕ್ಕೆ ಸಿಲುಕಿ ಕೌಟುಂಬಿಕ ಕಲಹ ಹಾಗೂ ಮಕ್ಕಳ ಶಿಕ್ಷಣ ಕುಂಠಿತಗೊಳ್ಳುವಂತಹ ಗಂಭೀರ ಸಾಮಾಜಿಕ ಸಮಸ್ಯೆಗಳು ಸೃಷ್ಟಿಯಾಗಿವೆ.
ಈ ಹಿನ್ನೆಲೆಯಲ್ಲಿ ಕೇವಲ ಕಾನೂನು ಕ್ರಮಕ್ಕೆ ಸೀಮಿತವಾಗದೆ ಸಾಮಾಜಿಕ ಕಾಳಜಿಯಿಂದ ಕಾರ್ಯಪ್ರವೃತ್ತರಾಗಿರುವ ಪಿ.ಎಸ್.ಐ ದೇವರಾಜ್ ಅವರು, ಗ್ರಾಮಗಳಲ್ಲಿ ಪೋಷಕರ ಸಭೆಗಳನ್ನು ನಡೆಸಿ ಜೂಜಾಟವು ಕೇವಲ ವ್ಯಕ್ತಿಗತ ಹವ್ಯಾಸವಲ್ಲದೆ, ಇಡೀ ಸಮಾಜದ ಆರ್ಥಿಕ ಹಿತಾಸಕ್ತಿಗೆ ಮಾರಕವಾದ ಪಿಡುಗು ಎಂಬುದನ್ನು ಮನವರಿಕೆ ಮಾಡುತ್ತಿದ್ದಾರೆ.
ಇದೇ ವೇಳೆ ಕಠಿಣ ಎಚ್ಚರಿಕೆ ನೀಡಿರುವ ಅವರು, “ಯಾರೇ ಆಗಲಿ ಕಾನೂನು ಬಾಹಿರವಾಗಿ ಜೂಜಾಟದಲ್ಲಿ ತೊಡಗುವುದು ಅಥವಾ ಅಕ್ರಮವಾಗಿ ಬಡ್ಡಿ ದಂಧೆ ನಡೆಸಿ ಜನರಿಗೆ ಕಿರುಕುಳ ನೀಡುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಲಾಗುವುದು” ಎಂಬುದಾಗಿ ಗುಡುಗಿದ್ದಾರೆ.
ಯುವಕರು ಮತ್ತು ಮಹಿಳೆಯರಿಗಾಗಿ ಮೌಲ್ಯಾಧಾರಿತ ಮಾಹಿತಿ ಶಿಬಿರಗಳನ್ನು ಆಯೋಜಿಸಿ ಅಕ್ರಮ ಬಡ್ಡಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಈ ಪ್ರಯತ್ನಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಯುವ ಸಂಘಟನೆಗಳು ಸಾಥ್ ನೀಡುತ್ತಿದ್ದು, ಪೊಲೀಸ್ ಇಲಾಖೆಯ ಈ ಸಮಯೋಚಿತ ಕ್ರಮದಿಂದಾಗಿ ಹಳ್ಳಿಗಾಡಿನ ಅನೇಕ ಬಡ ಕುಟುಂಬಗಳು ವಿನಾಶದ ಅಂಚಿನಿಂದ ಪಾರಾಗುವ ಭರವಸೆ ಮೂಡಿದೆ.

