
ಹಿರಿಯೂರು:
ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಾಮಾಜಿಕ ಹಾಗೂ ವ್ಯವಹಾರಿಕ ಜ್ಞಾನವೂ ಅತ್ಯವಶ್ಯಕ ಎಂಬುದಾಗಿ ಕರ್ನಾಟಕ ರಾಜ್ಯ ಆರ್ಯವೈಶ್ಯ ವಿದ್ಯಾಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾದ ಕೆ.ವಿ.ಅಮರೇಶ್ ಅವರು ಹೇಳಿದರು.
ನಗರದ ವಾಸವಿ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಆಹಾರಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವ್ಯವಹಾರಿಕ ಜ್ಞಾನ ವೃದ್ಧಿಸುವಂತಹ ಚಟುವಟಿಕೆ ಶಿಕ್ಷಣ ಹೆಚ್ಚು ಪರಿಣಾಮಕಾರಿ. ಬಂಡವಾಳ ಹೂಡಿಕೆ, ಲಾಭ, ನಷ್ಟ ಇವುಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವಂತ ಕಾರ್ಯ ಸ್ತುತ್ಯರ್ಹ ಎಂಬುದಾಗಿ ಅವರು ಹೇಳಿದರು.
4 ರಿಂದ 9ನೇ ತರಗತಿವರೆಗಿನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಹಾರ ಮೇಳದಲ್ಲಿ ವಿವಿಧ ಆಹಾರ ಪದಾರ್ಥಗಳ ಅಂಗಡಿಗಳನ್ನು ತೆರೆದು ವ್ಯಾಪಾರ ವಹಿವಾಟು ನಡೆಸಿದರು.
ಕೇವಲ10ರೂಪಾಯಿಗೆ ಪಾನಿಪುರಿ, ಮಸಾಲಾಪುರಿ, ಚಿತ್ರಾನ್ನ, ಪಲಾವ್, ಮಜ್ಜಿಗೆ, ಕೋಸಂಬರಿ, ನೀರಿನ ಬಾಟಲ್, ನಿಂಬೆಹಣ್ಣಿನ ಜ್ಯೂಸ್, ಕಡಲೆಕಾಯಿ ನಿಪ್ಪಟ್ಟು, ಮಸಾಲಕಾಫಿ ಮತ್ತು ಚಹಾ ಮುಂತಾದ ಬಗೆಬಗೆಯ ಪದಾರ್ಥಗಳನ್ನು ಪೋಷಕರಿಗೆ ಹಾಗೂ ಗ್ರಾಹಕರಿಗೆ ನೀಡಿದರು.

ಈ ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು 50ಸಾವಿರ ರೂಗಳಿಗಿಂತ ಹೆಚ್ಚು ವಹಿವಾಟು ನಡೆಸಿದರು. ಲಾಭಾಂಶದ ಹಣವನ್ನು ಸೈನಿಕ ನಿಧಿಗೆ ಅರ್ಪಿಸಲಾಗುವುದು ಎಂದು ಆಹಾರ ಮೇಳದ ಸಂಯೋಜಕಿ ಉಷಾರಾಣಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಗೌರವಾಧ್ಯಕ್ಷರಾದ ಆನಂದಶೆಟ್ಟಿ, ವಿದ್ಯಾ ಸಂಸ್ಥೆಯ ಆಡಳಿತ ಕಾರ್ಯದರ್ಶಿ ಕೆ.ಜಿ.ಶ್ರೀಧರ್, ಶಿಕ್ಷಣ ಕಾರ್ಯದರ್ಶಿ ಆರ್.ಪ್ರಕಾಶ್ ಕುಮಾರ್, ವಾಸವಿಯುವಜನ ಸಂಘದ ಅಧ್ಯಕ್ಷರಾದ ಜಗದೀಶ್, ಆರ್ಯವೈಶ್ಯ ಸಮಾಜದ ಕಾರ್ಯದರ್ಶಿ ಪಿ.ವಿ.ನಾಗರಾಜ್, ಮುಖ್ಯ ಶಿಕ್ಷಕ ಹೆಚ್.ಸಿ.ಶರಣಪ್ಪ, ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಶಿವಶಂಕರಮಠದ್, ದೈಹಿಕ ಶಿಕ್ಷಣಶಿಕ್ಷಕ ದಿಲೀಪ್, ಶಿಕ್ಷಕರು,ಪೋಷಕರು ಉಪಸ್ಥಿತರಿದ್ದರು.

