
ಬೆಂಗಳೂರು:
ಚಿತ್ರದುರ್ಗ ಜಿಲ್ಲೆಯ ಬಯಲುಸೀಮೆಯ ಭದ್ರಾ ಮೇಲ್ದಂಡೆ ಯೋಜನೆ ಚಿತ್ರದುರ್ಗ ಮತ್ತು ತುಮಕೂರು ಶಾಖೆ ಕಾಮಗಾರಿಗಳಿಗೆ ಕನಿಷ್ಠ ಐದು ಸಾವಿರ ಕೋಟಿ ರೂಗಳನ್ನ ರಾಜ್ಯ ಸರ್ಕಾರ ಈ ಸಾಲಿನ ಬಜೆಟ್ ನಲ್ಲಿ ಮೀಸಲಿಡುವ ಜೊತೆಗೆ ಹಿರಿಯೂರು ವಾಣಿವಿಲಾಸ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸುವ ಮೂಲಕ ಜಿಲ್ಲೆಯ ರೈತರ ಅಭಿವೃದ್ಧಿಗೆ ಸರ್ಕಾರ ಸಹಕರಿಸಬೇಕು ಎಂಬುದಾಗಿ ಕರ್ನಾಟಕ ರಾಜ್ಯ ರೈತಸಂಘದ ಮುಖಂಡರುಗಳಾದ ರಾಜ್ಯಾಧ್ಯಕ್ಷ ಬಡಗಲುನಾಗೇಂದ್ರ, ರಾಜ್ಯ ಗೌರವಾಧ್ಯಕ್ಷ ಚಾಮರಸಮಾಲಿಪಾಟೀಲ, ರಾಜ್ಯ ಪ್ರಧಾನಕಾರ್ಯದರ್ಶಿ ಎನ್.ಡಿ.ವಸಂತ್ ಕುಮಾರ್, ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರನ್ನು ಒತ್ತಾಯಿಸಿದರು.

ಬೆಂಗಳೂರಿನ ವಿಧಾನಸಭೆಯ ಸಮ್ಮೇಳನ ಸಭಾಂಗಣದಲ್ಲಿ ರಾಜ್ಯ ರೈತಸಂಘದ ವತಿಯಿಂದ ಭದ್ರಾ ಮೇಲ್ದಂಡೆ ಯೋಜನೆ ಚಿತ್ರದುರ್ಗ ಮತ್ತು ತುಮಕೂರು ಶಾಖೆ ಕಾಮಗಾರಿಗೆ ಕನಿಷ್ಠ ಐದು ಸಾವಿರ ಕೋಟಿ ರೂ ಮೀಸಲು ಇಡುವಂತೆ ಮತ್ತು ಹಿರಿಯೂರು ವಾಣಿವಿಲಾಸ ಸಹಕಾರ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವಂತೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರಿಗೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪ್ರಾರಂಭವಾಗಿ ಸುಮಾರು 18 ವರ್ಷಗಳು ಕಳೆದಿದ್ದು, ಸದರಿ ಕಾಮಗಾರಿಗೆ ಇದುವರೆಗೂ 11, 409.55 ಕೋಟಿ ರೂಗಳ ಕಾಮಗಾರಿ ಪ್ರಗತಿ ಹಂತದಲ್ಲಿದೆ. 2019-20 ರಿಂದ ಭದ್ರಾ ಮೇಲ್ದಂಡೆ ಯೋಜನೆ ಮುಖಾಂತರ ತಾಲ್ಲೂಕಿನ ವಾಣಿವಿಲಾಸಸಾಗರ ಸಾಗರ ಜಲಾಶಯಕ್ಕೆ ತಾತ್ಕಾಲಿಕವಾಗಿ ನೀರು ಹರಿಸುತ್ತಿದ್ದು, 89 ವರ್ಷಗಳ ನಂತರ 2022, 2025ರಲ್ಲಿ 3ಬಾರಿ ಕೋಡಿ ಹರಿದಿದ್ದು ರೈತರ ಮೊಗದಲ್ಲಿ ಮಂದಹಾಸ ಬೀರಿದ್ದು,

ಸದರಿ ಕಾಮಗಾರಿ ಪೂರೈಸಲು 2026-27ನೇ ಸಾಲಿನ ಬಜೆಟ್ ನಲ್ಲಿ ಚಿತ್ರದುರ್ಗ ಮತ್ತು ತುಮಕೂರು ಉಪಕಾಲುವೆ ಕಾಮಗಾರಿ ಪೂರೈಸಲು ಕನಿಷ್ಠ 5000 ಕೋಟಿ.ರೂಗಳನ್ನು ಘೋಷಿಸುವಂತೆ ಜಿಲ್ಲೆಯ ರೈತರ ಪರವಾಗಿ ಕೋರುತ್ತೇನೆ ಮತ್ತು ಅಂತರ್ಜಲ ಕುಸಿತದಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರಿನಿಂದ ವಂಚಿತವಾಗಿರುವ ಹಿರಿಯೂರು ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿಸಲು ಕನಿಷ್ಠ 500ಕೋಟಿರೂಗಳನ್ನು ಮೀಸಲಿಡುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಯಿತು.
ಹಿರಿಯೂರು ನಗರ ವ್ಯಾಪ್ತಿಯಲ್ಲಿ 2 ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ 1250 ಟನ್ ಕಬ್ಬು ನುರಿಸುವ ಸುಮಾರು 271 ಎಕರೆ ವಿಸ್ತೀರ್ಣದ ದೇಶದಲ್ಲಿಯೇ ಅತಿ ಹೆಚ್ಚು ಬೆಲೆ ಬಾಳುವ ಮತ್ತು ಸಾವಿರಾರು ಕಾರ್ಮಿಕರಿಗೆ ಉದ್ಯೋಗ ನೀಡಿದ ಮಧ್ಯಕರ್ನಾಟಕ, ಬಯಲು ಸೀಮೆಯ ಬೃಹತ್ ವಾಣಿವಿಲಾಸ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿ ಜಿಲ್ಲೆಯ ರೈತರಿಗೆ ಮತ್ತು ಕಾರ್ಮಿಕರಿಗೆ ಉದ್ಯೋಗ ನೀಡುವಂತೆ ಮನವಿ ಮಾಡಿದರು.

ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರು ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ, ಅತಿ ಹಿಂದುಳಿದ ಸಮುದಾಯದವರೇ ಹೆಚ್ಚಿಗೆ ವಾಸಿಸುತ್ತಿದ್ದು, ಕೃಷಿ ಉಪಕರಣಗಳು, ಪರಿಕರಗಳು, ಟ್ರ್ಯಾಕ್ಟರ್, ಬಿತ್ತದನೆ ಬೀಜ, ಗೊಬ್ಬರ ಇತ್ಯಾದಿಗಳಿಗೆ ಹೆಚ್ಚಿನ ಅನುದಾನ ನಿಗದಿಪಡಿಸುವಂತೆ ಮನವಿ ಮಾಡಿದರು.
ಜಿಲ್ಲೆಯಲ್ಲಿ ರೈತರು ತಮ್ಮ ಜಮೀನುಗಳಿಗೆ ಕೃಷಿ ಕಾರ್ಯ ಚಟುವಟಿಕೆಗಳಿಗೆ ರೂಢಿಗತ ದಾರಿ, ಬಂಡಿಜಾಡು ಪಾಲುದಾರಿ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದು ಎಲ್ಲಾ ರೈತರು ತಮ್ಮ ಜಮೀನುಗಳಿಗೆ ಜನಜಾನುವಾರು ವಾಹನಗಳು ಇತ್ಯಾದಿಗಳಿಗೆ ಬಲಾಢ್ಯರು ನಕಾಶದಾರಿ ಇಲ್ಲ ಎಂದು ಅಡ್ಡಿಪಡಿಸಿರುತ್ತಾರೆ ಹಾಗೂ ನ್ಯಾಯಾಲಯದಲ್ಲಿ ವ್ಯಾಜ್ಯಗಳು ಸಹ ದಾಖಲಾಗಿರುತ್ತವೆ. ರೈತರು ತಮ್ಮ ಜಮೀನುಗಳಿಗೆ ಹೋಗಿ ಬರಲು ಯಾರು ಅಡ್ಡಿಪಡಿಸದಂತೆ ಕಾನೂನು ರೂಪಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಕೃಷಿ ಸಚಿವರಾದ ಚೆಲುವರಾಯಸ್ವಾಮಿ, ಪಶುಸಂಗೋಪನಾ ಸಚಿವರಾದ ವೆಂಕಟೇಶ್, ಕರ್ನಾಟಕ ರಾಜ್ಯ ರೈತಸಂಘದ [ಪುಟ್ಟಣ್ಣಯ್ಯಬಣದ] ರಾಜ್ಯಾಧ್ಯಕ್ಷರಾದ ಬಡಗಲುಪುರ ನಾಗೇಂದ್ರ, ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ, ಉಪಾಧ್ಯಕ್ಷರುಗಳಾದ ಶಿವಾನಂದಕುಗ್ಗವೆ, ಮಂಜುಳಾಅಕ್ಕಿ, ರಾಜ್ಯ ಪ್ರಧಾನಕಾರ್ಯದರ್ಶಿ ಎನ್.ಡಿ.ವಸಂತ್ ಕುಮಾರ್, ಮಾಜಿ ಅಡ್ವಕೇಟ್ ಜನರಲ್ ಪ್ರೋ.ರವಿವರ್ಮ ಕುಮಾರ್, [ನಂಜುಂಡಸ್ವಾಮಿಬಣದ]ರೈತಮುಖಂಡ ಹೆಚ್.ಆರ್.ಬಸವರಾಜಪ್ಪ, ಸೇರಿದಂತೆ ಅನೇಕ ರೈತಮುಖಂಡರು ಪಾಲ್ಗೊಂಡಿದ್ದರು.

