
ಹಿರಿಯೂರು:
ಹಿರಿಯೂರು ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸುತ್ತಿದ್ದ ಲಾರಿಗಳಿಂದ ಡೀಸೆಲ್ ಕಳ್ಳತನ ಮಾಡುತ್ತಿದ್ದ ಭಾರಿ ಜಾಲವೊಂದನ್ನು ಸಾರ್ವಜನಿಕರು ಭೇದಿಸಿದ್ದಾರೆ. ಸಿನಿಮೀಯ ಮಾದರಿಯಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಒಂಬತ್ತು ಮಂದಿ ಕಳ್ಳರ ಪೈಕಿ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದ್ದು, ಉಳಿದ ಎಂಟು ಮಂದಿ ಪರಾರಿಯಾಗಿದ್ದಾರೆ.

ಲಾರಿಗಳಿಂದ ಡೀಸೆಲ್ ಕಳ್ಳತನ ಮಾಡುತ್ತಿದ್ದ ವೇಳೆ ಜಾಗೃತರಾದ ಸಾರ್ವಜನಿಕರು ಕಳ್ಳರ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ, ಕಳ್ಳತನ ಮಾಡುವ ಉದ್ದೇಶಕ್ಕಾಗಿಯೇ ಈ ತಂಡವು ಸ್ವಂತ ಲಾರಿಯನ್ನು ಖರೀದಿಸಿ ಬಳಸಿರುವುದು ಬೆಳಕಿಗೆ ಬಂದಿದೆ. ಈ ಲಾರಿಯನ್ನು ಅವರು ಖರೀದಿಸಿದ್ದೇ ಅಥವಾ ಕಳ್ಳತನ ಮಾಡಿದ್ದೇ ಎಂಬುದು ತನಿಖೆಯಿಂದ ಹೊರಬರಬೇಕಿದೆ.

ಪೊಲೀಸರು ವಶಪಡಿಸಿಕೊಂಡ ಲಾರಿಯಲ್ಲಿ ಈ ಹಿಂದೆ ಕದ್ದಿದ್ದ ಡೀಸೆಲ್ ಮತ್ತು ಇತರ ಬೆಲೆಬಾಳುವ ವಸ್ತುಗಳು ಪತ್ತೆಯಾಗಿವೆ. ಘಟನೆ ನಡೆದ ಸ್ಥಳದಿಂದ ಓಡಿ ಹೋದ ಉಳಿದ 8 ಮಂದಿ ಆರೋಪಿಗಳಿಗಾಗಿ ಪೊಲೀಸರು ಶೋಧವನ್ನು ನಡೆಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದ್ದ ಈ ಕಳ್ಳತನದ ಜಾಲ ಪತ್ತೆಯಾಗಿರುವುದು ವಾಹನ ಸವಾರರಲ್ಲಿ ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ. ಸದ್ಯ ಹಿರಿಯೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

