
ಹಿರಿಯೂರು:
ತಾಲ್ಲೂಕಿನಲ್ಲಿಯೇ ಅತ್ಯಂತ ಹಿಂದುಳಿದ ಮತ್ತು ಬರಪೀಡಿತ ಕಲ್ವಳ್ಳಿ ಭಾಗದ ಜವನಗೊಂಡನಹಳ್ಳಿ ಹೋಬಳಿಯ 06 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 100 ಜನವಸತಿ ಪ್ರದೇಶಗಳಲ್ಲಿ ಮಳೆಯ ಅಭಾವದಿಂದ ಸುಮಾರು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಮತ್ತು ಅಂತರ್ಜಲ ಕುಸಿತದ ಹಿನ್ನಲೆಯಲ್ಲಿ ಈ ಭಾಗದ ಗ್ರಾಮಗಳಿಗೆ ಮತ್ತು ಕೆರೆಗಳಿಗೆ ನೀರು ತುಂಬಿಸುವ ಮೂಲಕ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಲ ಸಂಪನ್ಮೂಲ ಸಚಿವರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಜವನಗೊಂಡನಹಳ್ಳಿ ಹೋಬಳಿಯ 16 ಕೆರೆಗಳು ಮತ್ತು ಗಾಯಿತ್ರಿ ಜಲಾಶಯಕ್ಕೆ ಕುಡಿಯುವ ನೀರು ತುಂಬಿಸುವ ಯೋಜನೆಯ ಕಾಮಗಾರಿಯ ಪ್ರಸ್ತಾವನೆಯನ್ನು ಸಣ್ಣ ನೀರಾವರಿ ಇಲಾಖೆಗೆ ಸಲ್ಲಿಸಲಾಗಿತ್ತು.
ಈ ಕಾಮಗಾರಿ ಅನುಷ್ಠಾನಕ್ಕೆ ಬೇಕಾಗುವ ನೀರಿನ ಹಂಚಿಕೆ ಬಗ್ಗೆ ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ರವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸಭೆ ಯನ್ನು ಸಹ ನಡೆಸಲಾಗಿದ್ದು,
ಉಪಮುಖ್ಯಮಂತ್ರಿಗಳು ಸಭೆಯಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕಾಗಿರುವುದರಿಂದ ಈ ಯೋಜನೆಗೆ ಬೇಕಾಗುವ ನೀರಿನ ಹಂಚಿಕೆ ಮಾಡುವ ಬಗ್ಗೆ ಉಪಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರ ಜಯಪ್ರಕಾಶ್ ಇವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ವರದಿ ನೀಡುವಂತೆ ಮತ್ತು ಯಾವುದಾದರೂ ಮೂಲದಿಂದ ಹಂಚಿಕೆ ಮಾಡಲೇಬೇಕು ಎಂಬುದಾಗಿ ಡಿ.ಸಿ.ಎಂ. ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಕಳೆದ 6 ತಿಂಗಳಿಗೂ ಹೆಚ್ಚು ಕಾಲ ನಿರಂತರವಾಗಿ ಜಲ ಸಂಪನ್ಮೂಲ ಮತ್ತು ಸಣ್ಣ ನೀರಾವರಿ ಅಧಿಕಾರಿಗಳ ಸಭೆ ನಡೆಸಿ ಅಂತಿಮವಾಗಿ ಸಣ್ಣನೀರಾವರಿ ಇಲಾಖೆಯವರು ಈ ಯೋಜನೆಗೆ ಬೇಕಾಗುವ ನೀರಿನ ಪ್ರಮಾಣ 0.307 ಟಿ.ಎಂ.ಸಿ. ನೀರನ್ನು ಜಲಸಂಪನ್ಮೂಲ ಇಲಾಖೆಯಿಂದ ಸರ್ಕಾರದ ಆದೇಶ ಸಂಖ್ಯೆ:ಜಸಂಇ191ವಿ.ಬಿ.ವೈ.ಇ-2025 ಬೆಂಗಳೂರು 2026 ಫೆಬ್ರವರಿ2ರಂದು ಆದೇಶ ನೀಡಲಾಗಿರುತ್ತದೆ.
ಸದರಿ ನೀರಿನ ಹಂಚಿಕೆ ಆದೇಶವನ್ನು ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಇವರಿಂದ ಸ್ವೀಕರಿಸಿ, ಹಿರಿಯೂರು ತಾಲ್ಲೂಕು ಸಮಸ್ತ ರೈತ ಬಾಂಧವರ ಪರವಾಗಿ ಅದಲ್ಲೂ ವಿಶೇಷವಾಗಿ ಜವನಗೊಂಡನಹಳ್ಳಿ ಹೋಬಳಿಯ ಸಮಸ್ತ ಜನೆ ಪರವಾಗಿ ಹೃದಯಪೂರ್ವಕ ಕೃತಜ್ಞತೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುದಾಕರ್ ಅವರು ಸಲ್ಲಿಸಿದರು.
ಈ ಕಾಮಗಾರಿ ಅನುಷ್ಠನದಿಂದ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ 16 ಕೆರೆಗಳಾದ ಉಡುವಳ್ಳಿ ಕೆರೆ, ಗಾಂಧಿನಗರ ಚಿಕ್ಕಕೆರೆ, ಗಾಂಧಿನಗರ ಕೆರೆ, ಬಗ್ಗನಾಡು ಕೆರೆ, ವಡ್ಡನಹಳ್ಳಿ ಕೆರೆ, ಮಾವಿನಮಡು ಕೆರೆ, ದಿಂಡಾವರ ಕೆರೆ, ಮಾಳಗೊಂಡನಹಳ್ಳಿ ಕೆರೆ, ವೀರನಾಗತಿಹಳ್ಳಿ ಕೆರೆ, ಪಿಲಾಲಿಕೆರೆ, ಜವನಗೊಂಡನಹಳ್ಳಿ ಕೆರೆ, ಕಾಟನಾಯಕನಹಳ್ಳಿ ಕೆರೆ, ಅರಿಶಿನಗುಂಡಿ ಕೆರೆ, ಉಳಿವಿನಹಾಳ್ ಕೆರೆ, ಯಲ್ಲದಕೆರೆ ಕೆರೆ ಹಾಗೂ ಗಾಯಿತ್ರಿ ಜಲಾಶಯವನ್ನು ಕುಡಿಯುವ ನೀರಿಗಾಗಿ ಮತ್ತು ಅಂರ್ಜಲ ವೃದ್ಧಿ ಪಡಿಸಬಹುದಾಗಿರುತ್ತದೆ ಎಂಬುದಾಗಿ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಮೃತೇಶ್ವರಸ್ವಾಮಿ, ಬಾಬು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

