March 2, 2026
000003

ಹಿರಿಯೂರು :      

ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಮತ್ತು ಅಸ್ತವ್ಯಸ್ತವಾಗಿರುವ ಪಾರ್ಕಿಂಗ್ ಸಮಸ್ಯೆಗೆಮುಕ್ತಿ ನೀಡಲು ಹಿರಿಯೂರು ಪೋಲಿಸ್ ಇಲಾಖೆ ಈಗ ಕಾರ್ಯಪ್ರವೃತ್ತವಾಗಿದೆ. ನಗರದ ದಕ್ಷ ಪೊಲೀಸ್ ನಿರೀಕ್ಷಕರಾದ ಮೊಹಮ್ಮದ್ ಸಿರಾಜ್ ಅವರು ಬೀದಿಗಿಳಿದಿದ್ದು, ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.

ನಗರಕ್ಕೆ ಗ್ರಾಮಗಳಿಂದ ಬರುವ ಜನರು ಹಾಗೂ ಸ್ಥಳೀಯರು ಸರಿಯಾದ  ಜಾಗದಲ್ಲಿ ಮಾತ್ರ ವಾಹನಗಳನ್ನು ನಿಲ್ಲಿಸಬೇಕು. ಮುಖ್ಯ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಗಾಡಿಗಳನ್ನು ಬಿಟ್ಟು ಹೋದರೆ, ಪೊಲೀಸರು ತಕ್ಷಣವೇ ದಂಡ ವಿಧಿಸುವುದಲ್ಲದೆ ವಾಹನಗಳನ್ನು ಜಪ್ತಿ ಮಾಡುವ ಸಾಧ್ಯತೆಯೂ ಇದೆ.

ಕೆಲವು ಅಂಗಡಿ ಮಾಲೀಕರು ತಮ್ಮ ಕಾರು ಮತ್ತು ಬೈಕ್ ಗಳನ್ನು ಅಂಗಡಿಗಳ ಮುಂಭಾಗದಲ್ಲೇ ಸಾಲಾಗಿ ನಿಲ್ಲಿಸುತ್ತಿರುವುದರಿಂದ ಸಾರ್ವಜನಿಕರಿಗೆ ಮತ್ತು ಗ್ರಾಹಕರಿಗೆ ಸ್ಥಳಾವಕಾಶ ಇಲ್ಲದಂತಾಗಿದೆ. ಇನ್ನು ಮುಂದೆ ಫುಟ್ಪಾತ್ ಒತ್ತುವರಿ ಮಾಡಿ ವ್ಯಾಪಾರ ಮಾಡುವುದು ಅಥವಾ ವಾಹನ ನಿಲ್ಲಿಸುವುದು ಕಂಡುಬಂದರೆ ಭಾರಿ ಮೊತ್ತದ ದಂಡ ತೆರಬೇಕಾಗುತ್ತದೆ ಎಂಬುದಾಗಿ  ಅವರು ಎಚ್ಚರಿಸಿದ್ದಾರೆ.

ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಪೋಲಿಸ್ ಇಲಾಖೆ ಅತ್ಯಂತ ಕಠಿಣವಾಗಿದೆ. ಬೈಕ್ ಸವಾರರಿಗೆ: 13 ಸಾವಿರ ರೂಗಳವರೆಗೆ ದಂಡ, ಕಾರ್ ಚಾಲಕರಿಗೆ: 18 ಸಾವಿರ ರೂಗಳವರೆಗೆ ದಂಡ, ಅಡ್ಡದಿಡ್ಡಿ ಪಾರ್ಕಿಂಗ್ ಗೆ 500 ರಿಂದ 3000 ರೂಪಾಯಿ ದಂಡದ ರೂಪದಲ್ಲಿ ಕಟ್ಟಬೇಕಾದ ಪರಿಸ್ಥಿತಿ ಬರಬಹುದು.

ಇನ್ಸೂರೆನ್ಸ್ (ವಿಮೆ) ಇಲ್ಲದ ಮತ್ತು ಸರಿಯಾದ ಪರವಾನಗಿ ಇಲ್ಲದ ವಾಹನಗಳನ್ನು ತಕ್ಷಣವೇ ವಶಕ್ಕೆ ಪಡೆಯಲಾಗುವುದು. ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಪಡಿಸುವ ಯಾವುದೇ ವಾಹನಗಳಿದ್ದರೂ ಪೋಲಿಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.

ಶಿಸ್ತಿನ ಪಾರ್ಕಿಂಗ್ ನಾಗರೀಕತೆಯ ಲಕ್ಷಣವಾಗಿದೆ. ನಗರದ ಸಂಚಾರ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸಾರ್ವಜನಿಕರು ಪೋಲಿಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂಬುದಾಗಿ ಪೊಲೀಸ್ ನಿರೀಕ್ಷಕರಾದ ಮೊಹಮ್ಮದ್ ಸಿರಾಜ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ವರದಿ: ಅರ್ಜುನ್ ವಿ ಬ್ಯಾಡರಹಳ್ಳಿ-ಪವರ್ ಫೋಕಸ್ ನ್ಯೂಸ್

About The Author

Leave a Reply

Your email address will not be published. Required fields are marked *