
ಹಿರಿಯೂರು:
ಮೈಸೂರು ಅರಸರು ಬಯಲು ಸೀಮೆಯ ನೀರಾವರಿ ಯೋಜನೆಗೆ ಆದ್ಯತೆ ನೀಡಿದ್ದರಿಂದ ಇಂದು ವಾಣಿವಿಲಾಸ ಸಾಗರ ಜಲಾಶಯದಲ್ಲಿ ಜಲ ವೈಭವ ಮೇಳೈಸಿದೆ ಎಂಬುದಾಗಿ ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಹೇಳಿದರು.
ತಾಲ್ಲೂಕಿನ ಹೊಸಯಳನಾಡು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೆ.ಪಿ.ಎಸ್. ಶಾಲೆ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮೈಸೂರು ಅರಸರು ನೀರಾವರಿ, ಕೃಷಿ, ಅಣೆಕಟ್ಟು, ಸೇತುವೆ, ಶಿಕ್ಷಣ ಮುಂತಾದ ಸಮಾಜಮುಖಿ ಕಾರ್ಯಗಳ ಮೂಲಕ ಬದುಕು ಕಟ್ಟಿಕೊಳ್ಳಲು ನೆರವಾಗಿದ್ದು, ಜನಪರ ಆಡಳಿತದ ಮೂಲಕ ನಾಡಿನ ಪ್ರಜೆಗಳಿಗೆ ಹಲವು ಕೊಡುಗೆ ನೀಡಿರುವುದು ಇತಿಹಾಸದ ಪುಟದಲ್ಲಿ ದಾಖಲಾಗಿದೆ ಎಂಬುದಾಗಿ ಅವರು ಹೇಳಿದರು.

ಮೈಸೂರು ಸಂಸ್ಥಾನಕ್ಕೆ ಬಯಲು ಸೀಮೆ ಜನರ ಜತೆ ಅವಿನಾಭಾವ ಸಂಬಂಧವಿದೆ. 2018-19ರಲ್ಲಿ ವಾಣಿವಿಲಾಸ ಸಾಗರ ಜಲಾಶಯ ಡೆಡ್ ಸ್ಟೋರೇಜ್ ತಲುಪಿದಾಗ ಇಲ್ಲಿಗೆ ಭೇಟಿ ನೀಡಿ, ವರುಣ ಕೃಪೆಗೆ ಪ್ರಾಥಿಸಿ ಹೋಮ-ಹವನ, ಗಂಗಾಪೂಜೆ ನೆರವೇರಿಸಲಾಗಿತ್ತು. ಎಂದರಲ್ಲದೆ,
2022, 2025ರಲ್ಲಿ ಜಲಾಶಯ ಭರ್ತಿಯಾದ ಸಂದರ್ಭದಲ್ಲಿ ಬಾಗಿನ ಅರ್ಪಿಸಲಾಗಿತ್ತು ಎಂದು ಸ್ಮರಿಸಿದ ಅವರು , ಇಲ್ಲಿನ ಜನರ ಪ್ರೀತಿ,ವಿಶ್ವಾಸಕ್ಕೆ ಎಂದಿಗೂ ಚಿರಋಣಿ ಎಂಬುದಾಗಿ ಅವರು ಹೇಳಿದರು.
ಜಿಲ್ಲಾ ಸಚಿವರಾದ ಡಿ.ಸುಧಾಕರ್ ಅವರು ಮಾತನಾಡಿ 2008ರಿಂದ ತಾಲ್ಲೂಕಿನ ಶೈಕ್ಷಣಿಕ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಿ 8ಮೊರಾರ್ಜಿ ವಸತಿ ಶಾಲೆ, ತೋಟಗಾರಿಕೆ ಕಾಲೇಜು,ಡಿಪ್ಲೊಮಾ, ಐ.ಟಿ.ಐ. ಹಾಗೂ ಸರ್ಕಾರಿ ಶಾಲೆಗಳಅಭಿವೃದ್ಧಿಗೆ ವಿಶೇಷಅನುದಾನ ನೀಡಿದ್ದರಿಂದ ಇಂದು ಜಿಲ್ಲೆಯ ಶಿಕ್ಷಣ ಕಾಶಿಯಾಗಿ ಹಿರಿಯೂರು ತಾಲ್ಲೂಕು ಹೆಜ್ಜೆ ಗುರುತು ಮೂಡಿಸುತ್ತಿದೆ ಎಂದರಲ್ಲದೆ,
ತಾಲ್ಲೂಕಿನ ನೀರಾವರಿ ಯೋಜನೆಗೆ ಮೈಸೂರು ಅರಸರ ಕೊಡುಗೆ ಸದಾ ಸ್ಮರಣೀಯ, ಹಿರಿಯೂರಿನ ಮುಖ್ಯ ರಸ್ತೆಗೆ ನಾಲ್ವಡಿ ಕೃಷ್ಣರಾಜರ ಹೆಸರು ನಾಮಾಕರಣ ಮಾಡಲಾಗಿದೆ ಎಂಬುದಾಗಿ ಅವರು ಹೇಳಿದರು.

ಚಿತ್ರನಟ ರಮೇಶ್ ಅರವಿಂದ್ ಅವರು ಮಾತನಾಡಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗೆ ಹೈಟೆಕ್ ಸ್ಪರ್ಶ ನೀಡಿ ಅಭಿವೃದ್ಧಿಪಡಿಸಿರುವ ನಾ.ತಿಪ್ಪೇಸ್ವಾಮಿ ಅವರ ನಿಸ್ವಾರ್ಥ ಸೇವೆಗೆ ಸಾಕ್ಷಿಯಾಗಿದೆ.ತಿಪ್ಪೇಸ್ವಾಮಿ ಅವರ ಸಮಾಜಮುಖಿ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂಬುದಾಗಿ ಅವರು ಹೇಳಿದರು.
ಶಿಕ್ಷಣ ಪ್ರೇಮಿ ನಾ.ತಿಪ್ಪೇಸ್ವಾಮಿ ಅವರು ಮಾತನಾಡಿ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆ,ಎಲ್ಲಾ ರೀತಿಯ ಶೈಕ್ಷಣಿಕ ಸೌಲಭ್ಯಗಳು ದೊರೆಯುವಂತಾಗಬೇಕು. ಶಾಲೆಯನ್ನು ಅಭಿವೃದ್ಧಿಪಡಿಸಿದ್ದರಿಂದ ಮಾದರಿಯಾಗಿ ಹೊರಹೊಮ್ಮಿದೆ ಎಂಬುದಾಗಿ ಅವರು ಹೇಳಿದರು.
ಸಂಸದರಾದ ಯದುವೀರ್ , ನಟ ರಮೇಶ್ ಅವರನ್ನು ನೋಡಲು ತಾಲ್ಲೂಕಿನ ವಿವಿಧೆಡೆಯಿಂದ ನೂರಾರು ಅಭಿಮಾನಿಗಳು ಆಗಮಿಸಿದ್ದರು. ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ತಿಮ್ಮಶ್ರೇಷ್ಠಿ, ಪ್ರವೀಣ್ ಡಿ.ರಾವ್, ಬಿ.ಇ.ಒ.ತಿಪ್ಪೇಸ್ವಾಮಿ, ಪ್ರಾಚಾರ್ಯ ಎಲ್.ನಾಗರಾಜಾಚಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿರಮೇಶ್, ಬಿ.ಜೆ.ಪಿ.ಮಂಡಲ ಅಧ್ಯಕ್ಷ ಅಭಿನಂದನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
