
ಹಿರಿಯೂರು:
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯು ಮಹಿಳೆಯರು ಸ್ವಾವಲಂಬನೆಯ ಬದುಕು ರೂಪಿಸಿಕೊಳ್ಳಲು ಅಗತ್ಯವಾದ ಆರ್ಥಿಕ ನೆರವು ನೀಡುತ್ತಿದ್ದು, ಉದ್ಯೋಗಸ್ಥ ಮಹಿಳೆಯರಿಗೆ ಸ್ವಾವಲಂಬನೆ ಬದುಕು ಆತ್ಮಸ್ಥೈರ್ಯವನ್ನು ತುಂಬುತ್ತದೆ, ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂಬುದಾಗಿ ವಕೀಲರ ಸಂಘದ ಅಧ್ಯಕ್ಷರಾದ ರಂಗೇನಹಳ್ಳಿ ರಾಮಚಂದ್ರಪ್ಪ ಹೇಳಿದರು.
ನಗರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮತ್ತು ವಾಣಿವಿಲಾಸಪುರ ಯೋಜನಾ ಕಚೇರಿಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ “ಗೃಹಸ್ಥ ಮಹಿಳೆ ಸುಖಿನಾ ಉದ್ಯೋಗಸ್ಥ ಮಹಿಳೆ ಸುಖಿನಾ” ಕುರಿತಂತೆ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಮಹಿಳೆಯರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಇಂದು ಮಹಿಳೆಯರ ಪರವಾಗಿ ಕಾನೂನುಗಳನ್ನು ರೂಪಿಸಲಾಗಿದ್ದು, ವಿವಿಧ ಇಲಾಖೆಗಳ ಮೂಲಕ ಸರ್ಕಾರ ಮಹಿಳೆಯರಿಗೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ, ಮಹಿಳೆಯರು ಇದರ ಸದುಪಯೋಗವನ್ನು ಪಡೆಯುವಂತಾಗಬೇಕು ಎಂಬುದಾಗಿ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಆಟೋಟ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಹಿಳೆಯರು ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಜನ ಜಾಗೃತಿ ವೇದಿಕೆಯ ಉಪಾಧ್ಯಕ್ಷರಾದ ಶಾಂತಕುಮಾರ್ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ತಾಯಿಮುದ್ದಮ್ಮ, ಸಂಸ್ಥೆ ಜಿಲ್ಲಾ ಯೋಜನಾಧಿಕಾರಿ ಆರ್.ಟಿ.ರತ್ನ, ವಿ.ವಿ.ಪುರ ಯೋಜನಾ ಕಚೇರಿಯ ಅನಿಲ್ ಕುಮಾರ್, ಅನಿತಾ ಉಪಸ್ಥಿತರಿದ್ದರು.
