
ಹಿರಿಯೂರು:
ತಾಲ್ಲೂಕಿನ ಬಬ್ಬೂರು ಫಾರಂ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ನವಂಬರ್ 14 ಹಾಗೂ 15ರಂದು ಸಮಗ್ರ ಕೃಷಿ ರೈತನ ಪ್ರಗತಿ ಧ್ಯೇಯದೊಂದಿಗೆ ಕೃಷಿ ಮೇಳ ಆಯೋಜಿಸಲಾಗಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂಬುದಾಗಿ ಕೇಂದ್ರದ ಸಹ ಸಂಶೋಧನಾ ನಿರ್ದೇಶಕರಾದ ಡಾ.ಶರಣಪ್ಪಜಂಗಂಡಿ ಅವರು ಹೇಳಿದರು.
ತಾಲ್ಲೂಕಿನ ಬಬ್ಬೂರು ಫಾರಂ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಮಂಗಳವಾರ ಕೃಷಿಮೇಳ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಮೇಳ 2ದಿನಗಳ ಕಾಲ ನಡೆಯಲಿದ್ದು, ಸಮಗ್ರ ಕೃಷಿ ಪದ್ಧತಿ, ಜೇನುವನ ಮತ್ತು ಕೀಟ ಪ್ರಪಂಚ, ಸಿರಿಧಾನ್ಯಗಳ ಮೌಲ್ಯ ವರ್ಧನೆ ಮತ್ತು ತಾಂತ್ರಿಕತೆಗಳು, ಗೋಡಂಬಿ ಬೆಳೆಯ ಪ್ರಾತ್ಯಕ್ಷಿತೆ, ಸಾವಾಯವ ಕೃಷಿ ಮತ್ತು ಅಣಬೆ ಬೇಸಾಯ, ಪಶುಸಂಗೋಪನೆ ಮತ್ತು ಮೀನು ತಂತ್ರಜ್ಞಾನ, ಮೌಲ್ಯವರ್ಧಿತ ಕೃಷಿ ಉತ್ಪನ್ನಗಳು, ಕೃಷಿ ಪರಿಕರ ಮತ್ತು ಯಂತ್ರೋಪಕರಣಗಳ ಪ್ರದರ್ಶನ,
ಅಲ್ಲದೆ, ರೇಷ್ಮೇ ಕೃಷಿ ತಂತ್ರಜ್ಞಾನ, ರೈತ ಉತ್ಪಾದಕರ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ರೈತರು ಹಾಗೂ ವಿಜ್ಞಾನಿಗಳೊಂದಿಗೆ ಸಂವಾದ ವಶೇಷವಾಗಿ ನಡೆಯಲಿದೆ.ಜತೆಗೆ ಪ್ರಮುಖ ಕೃಷಿ ತೋಟಗಾರಿಕೆ ಸಚಿವ ಪ್ರದರ್ಶನ ಮತ್ತು ಮಾರಾಟ ಇರಲಿದೆ ಎಂಬುದಾಗಿ ಅವರು ಹೇಳಿದರು.
ಈ ಕೃಷಿ ಮೇಳವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಉದ್ಘಾಟಿಸಲಿದ್ದು, ಸಂಸದ ಗೋವಿಂದ ಕಾರಜೋಳ ವಸ್ತುಪ್ರದರ್ಶನ ಉದ್ಘಾಟಿಸುವರು. ಶಾಸಕ ಬಿ.ಜಿ.ಗೋವಿಂದಪ್ಪ ಅವರು ತಾಂತ್ರಿಕ ಕೈಪಿಡಿಗಳ ಬಿಡುಗಡೆಗೊಳಿಸುವರು.ಶಾಸಕ ಟಿ.ರಘುಮೂರ್ತಿ ಅತ್ಯುತ್ತಮ ಕೃಷಿ ಕಾರ್ಮಿಕರಿಗೆ ಸನ್ಮಾನಿಸುವರು. ಇತರೆ ಗಣ್ಯರು ಭಾಗವಹಿಸಲಿದ್ದಾರೆ ಎಂಬುದಾಗಿ ಅವರು ಹೇಳಿದರು.
