
ಹಿರಿಯೂರು :
ಪೋಷಕರು ಆಂಗ್ಲಭಾಷೆಯ ವ್ಯಾಮೋಹಕ್ಕೆ ಒಳಗಾಗದೇ ಮಕ್ಕಳಲ್ಲಿ ಕನ್ನಡ ನಾಡು-ನುಡಿಯ ಬಗ್ಗೆ ಅಭಿಮಾನವನ್ನು ಬೆಳೆಸಬೇಕು ಅಲ್ಲದೆ, ಕನ್ನಡಭಾಷೆಯ ಇತಿಹಾಸ ಭವ್ಯಪರಂಪರೆ ಬಗ್ಗೆ ಹಾಗು ಕನ್ನಡ ಭಾಷೆ ಮತ್ತು ಕನ್ನಡ ಸಾಹಿತ್ಯಕ್ಕೆ ಇರುವ ಶ್ರೇಷ್ಠತೆಯನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು ಎಂಬುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ ಹೇಳಿದರು.
ನಗರದ ಬೆಟ್ಸ್ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಅಜ್ಜ-ಅಜ್ಜಿಯರ ದಿನಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಭುವನೇಶ್ವರಿ ಫೋಟೋಗೆ ಪೂಜೆಯನ್ನು ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ||ಹೆಚ್.ಯು.ಘನಶಂಕರ್ ಮಾತನಾಡಿ, ಜಗತ್ತಿನ ಎಲ್ಲಾ ಭಾಷೆಯ ಮೇಲೆ ಅಭಿಮಾನವಿರಲಿ, ಜೊತೆಯಲ್ಲಿ ನಮ್ಮ ಮಾತೃಭಾಷೆ ಕನ್ನಡದ ಮೇಲೆ ಕಿರು ವಯಸ್ಸಿನಿಂದಲೇ ಹಿಡಿತವನ್ನು ಸಾಧಿಸುವ ಜೊತೆಗೆ ಪ್ರೀತಿ, ಅಭಿಮಾನ ಬೆಳೆಸಿಕೊಳ್ಳಬೇಕು ಎಂಬುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ಶಿಕ್ಷಕ-ಶಿಕ್ಷಕಿಯರು, ಪೋಷಕರು, ಹಾಗೂ ಅಜ್ಜ-ಅಜ್ಜಿಯರು, ಮತ್ತು ಬೆಟ್ಸ್ ಸಿಬ್ಬಂದಿ ವರ್ಗದವರು, ನೆರೆಹೊರೆಯವರು ಮತ್ತು ಬೆಟ್ಸ್ ಶಾಲೆಯ ಪುಟಾಣಿ ಮಕ್ಕಳು ಉಪಸ್ಥಿತರಿದ್ದರು. ಸಂಪೂರ್ಣ ಕಾರ್ಯಕ್ರಮವನ್ನು ಶಾಲೆಯ ಪುಟಾಣಿ ಮಕ್ಕಳೇ ನಿರೂಪಿಸಿ ನಡೆಸಿಕೊಟ್ಟಿದ್ದು, ಈ ಕಾರ್ಯಕ್ರಮದ ವಿಶೇಷವಾಗಿತ್ತು.

ಈ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯ ನೆಚ್ಚಿನ ಹಾಡುಗಳೊಂದಿಗೆ ಸಾಂಸ್ಕೃತಿಕ ಚಟುವಟಿಕೆಯನ್ನು ಮಕ್ಕಳು ಪ್ರತಿಬಿಂಬಿಸಿದರು. ಇದೇ ಸಂದರ್ಭದಲ್ಲಿ ಅಜ್ಜ-ಅಜ್ಜಿಯರು ಅವರ ಮೊಮ್ಮಕ್ಕಳೊಂದಿಗೆ ತಾವೂ ಮಕ್ಕಳಾಗಿ ಆಟಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಂಭ್ರಮಿಸಿದರು. ಆಟದಲ್ಲಿ ಗೆದ್ದು ವಿಜೇತರಾದ ಅಜ್ಜ-ಅಜ್ಜಿಯರಿಗೆ ಹಾಗೂ ಮೊಮ್ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.
