
ಹಿರಿಯೂರು:
ಅಕ್ಟೋಬರ್ 19 ರಂದು ವಾಣಿವಿಲಾಸ ಸಾಗರ ಜಲಾಶಯ ಭರ್ತಿಯಾಗಿ, ಅಂದರೆ 130 ಅಡಿ ತುಂಬಿ ಹೆಚ್ಚಾದ ನೀರು ಕೋಡಿಯ ಮೂಲಕ ವೇದಾವತಿ ನದಿ ಕೆಳಭಾಗದಲ್ಲಿ ಹರಿಯುತ್ತಿದೆ. ವಾಣಿವಿಲಾಸ ಸಾಗರದ ಮೇಲ್ಭಾಗದಲ್ಲಿ ಅತಿ ಹೆಚ್ಚು ಮಳೆಯಾಗಿ ವಾಣಿವಿಲಾಸಸಾಗರಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದ್ದು ಅಕ್ಟೋಬರ್ 22ರಂದು 4000 ಕ್ಯೂಸೆಕ್ಸ್ ನೀರು, ಕೋಡಿಯ ಮೂಲಕ ಹೊರ ಹೋಗುತ್ತಿದೆ.
ನಮ್ಮ ಪಕ್ಕದ ತಾಲ್ಲೂಕಿನ ಗೌರವಾನ್ವಿತ ಹೊಸದುರ್ಗ ಶಾಸಕರಾದ ಬಿ.ಜಿ. ಗೋವಿಂದಪ್ಪನವರು ವಿ.ವಿ.ಸಾಗರದ ನೀರಿನ ಮಟ್ಟ 130ಅಡಿಗಿಂತ ಜಾಸ್ತಿ ಆಗಬಾರದು. ಜಲಾಶಯದ ಹಿಂದಿರುವ ಭಾಗದ ರೈತರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಅಲ್ಲಿದ್ದ ರೈತರನ್ನು ಕರೆದುಕೊಂಡು ಬಂದು ವಾಣಿವಿಲಾಸ ಸಾಗರ ಜಲಾಶಯದ ಸ್ಲೋಯಿಸ್ ಗೇಟ್ ಮೂಲಕ ನಾಲೆಗೆ ನೀರನ್ನು ಬಿಡಿಸಿರುತ್ತಾರೆ. ಇದು ಅವರ ಪ್ರತಿಷ್ಠೆ.
ಈ ಹಿಂದೆ ಸ್ವತಂತ್ರ ಪೂರ್ವದಲ್ಲಿ ಜಲಾಶಯವನ್ನು ನಿರ್ಮಿಸಬೇಕಾದ ಸಂದರ್ಭದಲ್ಲಿ ಜಲಾಶಯದಲ್ಲಿ 135 ಅಡಿ ನೀರು ತುಂಬಿದಾಗ, ನೀರು ಎಷ್ಟು ಜಾಗವನ್ನು ಆಕ್ರಮಿತವಾಗುತ್ತದೆಯೋ ಆ ಜಾಗವನ್ನೆಲ್ಲ ಅಂದೇ ಗುರುತಿಸಿ ಅಲ್ಲಿನ ರೈತರನ್ನು ಬೇರೆಡೆಗೆ ಸ್ಥಳಾಂತರಿಸಿರುತ್ತಾರೆ.
ಎಚ್.ಡಿ.ರೈಸ್ ಬರೆದಿರುವ ಪುಸ್ತಕದಲ್ಲಿ ಇದೆಲ್ಲವೂ ಇದೆ. ವಾಣಿವಿಲಾಸ ಸಾಗರ ಜಲಾಶಯದ ಕೋಡಿಯಲ್ಲಿ 2022 ರಲ್ಲಿ 6000 ಕ್ಯೂಸೆಕ್ಸ್ ನೀರು ಹೊರ ಹೋಗಿದೆ. ಜಲಾಶಯದ ವ್ಯಾಪ್ತಿ ಪ್ರದೇಶ 22,500 ಎಕರೆ ಎಂದು ಎಚ್ ಡಿ ರೈಸ್ ಬರೆದಿದ್ದಾರೆ. ಆದರೆ ಮಾನ್ಯ ಗೌರವಾನ್ವಿತ ಶಾಸಕರು ಅಲ್ಲಿನ ಜನರಿಗೆ ಅನಾನುಕೂಲವಾಗುತ್ತದೆ ಎಂದು ಪದೇಪದೇ ವಾಣಿವಿಲಾಸ ಸಾಗರ ಜಲಾಶಯದ ನೀರಿನ ಮಟ್ಟವನ್ನು ಯಾವುದೇ ಕಾರಣಕ್ಕೂ 130 ಅಡಿ ಇಂದ ಒಂದು ಅಡಿಯೂ ಹೆಚ್ಚಾಗಬಾರದು ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ.
ಮೈಸೂರು ಸಂಸ್ಥಾನದ ರಾಜರು ಅಂದು ಕಟ್ಟಿದಂತಹ ಅಣೆಕಟ್ಟಿಗೆ ನಮ್ಮಲ್ಲಿರುವ ಸ್ಥಳೀಯ ಜನಪ್ರತಿನಿಧಿಗಳು ಎಂತಹ ಕಾರ್ಯಕ್ಕೆ ಕೈ ಹಾಕಿದ್ದಾರೆ. ಮಾನ್ಯ ಹೊಸದುರ್ಗ ಶಾಸಕರಾದ ಬಿ.ಜಿ.ಗೋವಿಂದಪ್ಪನವರು ರೈತರ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ಹೊಸದುರ್ಗ ವ್ಯಾಪ್ತಿ ಪ್ರದೇಶದಲ್ಲಿ ಇನ್ನೊಂದು ಕೆರೆಯನ್ನು ಕಟ್ಟಿಸಲಿ. ಇರುವ ಕೆರೆಯ ವ್ಯಾಪ್ತಿಯನ್ನು ಕಡಿಮೆ ಮಾಡಲು ಹೊರಟಿರುವ ಇವರು ನಿಜವಾಗಿಯೂ ಚಿತ್ರದುರ್ಗ ಜಿಲ್ಲೆಯ ಜನಪ್ರತಿನಿಧಿಗಳೇ.
ಇವರಿಗೆ ಹೊಸದುರ್ಗ ಜನತೆಯ ಬಗ್ಗೆ ಮಾತ್ರ ಕಾಳಜಿ. ಮಾನ್ಯ ಗೌರವಾನ್ವಿತ ಶಾಸಕರು ಈ ನಿರ್ಧಾರವನ್ನು ಇಲ್ಲಿಗೆ ಕೈಬಿಡಬೇಕು .ಎಚ್ ಡಿ ರೈಸ್ ರ ಪ್ರಕಾರ ವಿವಿ ಸಾಗರದ ನೀರಿನ ಮಟ್ಟ 135 ಅಡಿ ತಲುಪಿದರು ಕೋಡಿಯಲ್ಲಿ 6000 ಕ್ಯೂಸೆಕ್ಸ್ ಹೊರ ಹೋಗುತ್ತದೆ.
ಒಟ್ಟಿನಲ್ಲಿ ಜಲಾಶಯದ ಹಿನ್ನೀರಿನ ವ್ಯಾಪ್ತಿಯನ್ನು ಸ್ವತಂತ್ರ ಪೂರ್ವದಲ್ಲಿ ಗುರುತಿಸಿ ಆಕ್ರಮಿಸಿಕೊಂಡಿರುತ್ತಾರೆ. 1933ರಲ್ಲಿ ಜಲಾಶಯ ಒಮ್ಮೆ ತುಂಬಿದೆ. ತದನಂತರ 2022 ರಲ್ಲಿ ಒಮ್ಮೆ ಮತ್ತು 2025ರಲ್ಲಿ ಎರಡು ಬಾರಿ ಅಂದರೆ ಇಲ್ಲಿಗೆ ಜಲಾಶಯ ನಾಲ್ಕು ಬಾರಿ ತುಂಬಿದೆ. 1933ರಿಂದ 2022ರ ವರೆಗೆ ದೀರ್ಘಕಾಲದ ವರೆಗೆ ಜಲಾಶಯ ಭರ್ತಿಯಾಗಿರುವುದಿಲ್ಲ. ಅಲ್ಲಿನ ರೈತರು ವ್ಯಾಪ್ತಿ ಪ್ರದೇಶವನ್ನು ಅಕ್ರಮವಾಗಿ ಆಕ್ರಮಿಸಿಕೊಂಡು ತೋಟ ತುಡಿಕೆಗಳನ್ನು ಕಟ್ಟಿಕೊಂಡು, ಇಂದು ನಮ್ಮ ಜಮೀನುಗಳು ಮುಳುಗಡೆಯಾಗುತ್ತವೆ ಎಂದು ಬೊಬ್ಬೆ ಹೊಡೆದರೆ ಇದಕ್ಕೆ ಯಾರು ಕಾರಣ.
ಮಾನ್ಯ ಶಾಸಕರಾದ ಬಿ.ಜಿ.ಗೋವಿಂದಪ್ಪನವರು ಇದನ್ನೇ ಅಸ್ತ್ರವಾಗಿ ಇಟ್ಟುಕೊಂಡು ಕೋಡಿಯ ಮಟ್ಟವನ್ನು ಕಡಿಮೆ ಮಾಡಲು ಹೊರಟಿರುವುದು ನಿಜಕ್ಕೂ ದುರಂತದ ಸಂಗತಿಯಾಗಿದೆ, ಶಾಸಕರೇ ದಯವಿಟ್ಟು ಈ ಕಾರ್ಯಕ್ಕೆ ಕೈ ಹಾಕಬೇಡಿ. ಎಂಬುದಾಗಿ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾದ ಕಸವನಹಳ್ಳಿ ರಮೇಶ್ ಮತ್ತು ವಾಣಿ ವಿಲಾಸ ಸಾಗರ ಹಾಗೂ ಭದ್ರಾ ಮೇಲ್ದಂಡೆ ಹಿತರಕ್ಷಣಾ ಸಮಿತಿ ನಿರ್ದೇಶಕರಾದ ಕೆ.ಶ್ರೀನಿವಾಸ್ ಪಿಟ್ಲಾಲಿ ಅವರು ಮನವಿ ಮಾಡಿದ್ದಾರೆ.

