
ಹಿರಿಯೂರು :
ಸಚಿವರಾದ ಡಿ.ಸುಧಾಕರ್ ಅವರು ಭದ್ರಾ ಮೇಲ್ದಂಡೆ ಯೋಜನೆ ಜಾರಿ ಆದೇಶ ಹೊರಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, ಬಯಲು ಸೀಮೆ ಶಾಶ್ವತ ನೀರಾವರಿ ಕಲ್ಪಿಸಬೇಕೆಂಬ ಅವರ ಕನಸು ನನಸಾಗುವುದನ್ನು ಕಣ್ತುಂಬಿಕೊಳ್ಳಲು ಅವರೇ ಇಲ್ಲವಾಗಿರುವುದು ನೋವಿನ ಸಂಗತಿ ಆಗಿದೆ ಎಂಬುದಾಗಿ ಶಾಸಕ ವೀರೇಂದ್ರ ಪಪ್ಪಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಐಮಂಗಳ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ಬಗ್ಗೆ ಹಮ್ಮಿಕೊಳ್ಳಲಾಗಿದ್ದ ರೈತರು ಅಧಿಕಾರಿಗಳು ಹಾಗೂ ವಿವಿಧ ಪಕ್ಷದ ಮುಖಂಡರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಐಮಂಗಲ ಹೋಬಳಿ ಬರಗಾಲಕ್ಕೆ ಕುಖ್ಯಾತಿ ಪಡೆದಿದೆ, ಜಿಲ್ಲೆಯಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶವಾಗಿದ್ದು, ಅಂತರ್ಜಲದಲ್ಲಿ ಫ್ಲೋರೈಡ್ ಅಂಶ ಯಥೇಚ್ಛವಾಗಿದೆ, ಈ ಹೋಬಳಿಯ ಕೆರೆಗಳಿಗೆ ನೀರು ತುಂಬಿಸಿದಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ರೈತರಿಗೆ ನೀರಾವರಿ ಕೃಷಿ ಮಾಡಲು ಅನುಕೂಲವಾಗುತ್ತದೆ, ಸುಧಾಕರ್ ಅವರ ಅನುಪಸ್ಥಿತಿಯಲ್ಲಿ ಸರ್ಕಾರದ ಮೇಲೆ ಒತ್ತಡ ತಂದು ರೈತರ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂಬುದಾಗಿ ಭರವಸೆ ನೀಡಿದರು.
ಈ ತಿಂಗಳ ಅಂತ್ಯದಲ್ಲಿ ಚಿತ್ರದುರ್ಗ ಸಮೀಪದ ಗೋನೂರು ಕೆರೆಯ ಪ್ರಯೋಗಾರ್ಥ ಭದ್ರಾ ಮೇಲ್ದಂಡೆ ಯೋಜನೆಯ ನೀರು ಹರಿಸಿದ ಹರಿಸಿದ್ದು ಅದೇ ವೇಳೆ ಐಮಂಗಲ ಭಾಗದ ಕೆರೆಗಳಿಗೂ ನೀರು ಹರಿಸಿದರೆ ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥವಾಗಲಿದೆ ಎಂದರಲ್ಲದೆ, ರೈತರು ಮನವಿ ಮಾಡಿದ್ದರಿಂದ ಕಾಮಗಾರಿ ವೀಕ್ಷಿಸಿದ್ದೇನೆ ನೀರು ಹರಿಸುವ ವಿಚಾರದಲ್ಲಿ ರಾಜಕೀಯ ಬೆರೆಸಲು ಹೋಗುವುದಿಲ್ಲ ಹಿರಿಯೂರು ಕ್ಷೇತ್ರದಲ್ಲಿ ನಾನು ಸ್ಪರ್ಧಿಸುವುದಿಲ್ಲ, ಚಿತ್ರದುರ್ಗ ಕ್ಷೇತ್ರದ ಸಮಸ್ಯೆಗಳೇ ಸಾಕಷ್ಟಿವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಬದ್ಧತೆ ತೋರಿಸಿದೆ ಮೇಲೆ ಮೇ 23 ಅಥವಾ 24ರಂದು ಉಪಮುಖ್ಯಮಂತ್ರಿಯವರು ಖುದ್ದಾಗಿ ಜಿಲ್ಲೆಗೆ ಭೇಟಿ ನೀಡಿ ರೈತರೊಂದಿಗೆ ಚರ್ಚೆ ನಡೆಸಲಿದ್ದಾರೆ, ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು ಹಾಜರಿರುತ್ತಾರೆ ಎಂಬುದಾಗಿ ಮಾಜಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು.
ಐಮಂಗಲ ಹೋಬಳಿಯ ಗೌನಹಳ್ಳಿ ಗೌಡನಹಳ್ಳಿ ಬೀರನಹಳ್ಳಿ ಒಳಗೊಂಡಂತೆ ಹತ್ತಾರು ಹಳ್ಳಿಗಳಲ್ಲಿ ಕುಡಿಯುವ ನೀರು ಹಾಗೂ ಕೃಷಿ ತೋಟಗಳನ್ನು ರೈತರ ನಡೆಸುತ್ತಿರುವ ಹೆಣಗಾಟದ ಬಗ್ಗೆ ಯುವ ಮುಖಂಡರು ಪಾಂಡುರಂಗ ಐಮಂಗಲ ಭಾಗದ ಕೆರೆಗಳಿಗೆ ನೀರು ತುಂಬಿಸುವ ಹೋರಾಟ ಸಮಿತಿ ಅಧ್ಯಕ್ಷ ತಿಪ್ಪೀರಣ್ಣ ಸಭೆಯ ಗಮನ ಸೆಳೆದರು.
ಈ ಸಂದರ್ಭದಲ್ಲಿ ನೀರಿನ ವಿಚಾರವಾಗಿ ರಾಜಕೀಯ ಮಾತನಾಡುವುದು ಸರಿಯಲ್ಲ, ನಾವು ಇಲ್ಲಿ ಪಕ್ಷ ಹಾಗೂ ರಾಜಕೀಯ ಬಿಟ್ಟು ನಮ್ಮ ಜಿಲ್ಲೆಯ ರೈತರಿಗೆ ನೀರಾವರಿ ಅನುಕೂಲ ಮಾಡುವ ನಿಟ್ಟಿನಲ್ಲಿ ಹಾಗೂ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ನಡೆಯಬೇಕಿದೆ ಎಂಬುದಾಗಿ ಬಿಜೆಪಿ ಮುಖಂಡ ಎನ್.ಆರ್.ಲಕ್ಷ್ಮಿಕಾಂತ್ ಸಲಹೆ ನೀಡಿದರು.
ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸೂರಗೊಂಡನಹಳ್ಳಿ ಕೃಷ್ಣಮೂರ್ತಿ ಮಾತನಾಡಿ, ಸಚಿವ ಸುಧಾಕರ್ ರವರು ನಿಧನರಾಗಿ ಕೆಲವೇ ದಿನಗಳಲ್ಲಿ ಜಿಲ್ಲೆ ಇತರೆ ಶಾಸಕರು ಮುಖಂಡರು ಹಾಗೂ ಕಾರ್ಯಕರ್ತರಿಗೆ ಮಾಹಿತಿ ಇಲ್ಲದೆ ಭದ್ರಕಾಮಗಾರಿ ವೀಕ್ಷಿಸುವುದು ಸರಿಯಲ್ಲ ಎಲ್ಲಾ ಶಾಸಕರು ಹಾಗೂ ಕಾರ್ಯಕರ್ತರನ್ನು ಒಳಗೊಂಡಂತೆ ಪಕ್ಷಾತೀತವಾಗಿ ವೀಕ್ಷಿಸಿ, ನೀರು ಹರಿಸುವ ಕೆಲಸ ಮಾಡಿದರೆ ಸುಧಾಕರ್ ಅವರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂಬುದಾಗಿ ತಿಳಿಸಿದರು.
ಈ ಸಭೆಯಲ್ಲಿ ಗ್ಯಾರಂಟಿ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಣ್ಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಾದಿ ರಮೇಶ್ ಬೀರಲಿಂಗೇಗೌಡ ಟಿ ಚಂದ್ರಶೇಖರ್ ಕಲ್ಲಟ್ಟಿ ಹರೀಶ್ ಕಂದೀಕೆರೆ ಸುರೇಶ್ ಬಾಬು ರೈತ ಮುಖಂಡ ಯಶ್ವಂತ್ ಗೀತಾ ನಂದಿನಿ ಗೌಡ ಅರ್ತಿಕೋಟೆ ತಿಪ್ಪೇಸ್ವಾಮಿ ಜ್ಞಾನೇಶ್ ಹಾಗು ಐಮಂಗಲ ಭಾಗದ ರೈತರು ಹಾಜರಿದ್ದರು.
