
ಹಿರಿಯೂರು:
ಡಾ.ರಾಜಕುಮಾರ್, ಶಂಕರ್ ನಾಗ್ ಮತ್ತು ಪುನೀತ್ ರಾಜಕುಮಾರ್ ರವರು ಕರ್ನಾಟಕ ಕಲಾ ಶ್ರೀಮಂತಿಕೆಯ ಅಸ್ಮಿತೆ, ಕಲಾವಿದರ ಬದುಕಿನ ಜೊತೆಗೆ ನಾಡಿನ ಕನ್ನಡ ಭಾಷೆಯನ್ನು ಶ್ರೀಮಂತ ಗೊಳಿಸಿದ ಕೀರ್ತಿ ಡಾ.ರಾಜಕುಮಾರ್ ಅವರಿಗೆ ಸಲ್ಲುತ್ತದೆ ಎಂಬುದಾಗಿ ಜಿ.ಪಂ.ಮಾಜಿ ಅಧ್ಯಕ್ಷರಾದ ಮೀಸೆಮಹಾಲಿಂಗಪ್ಪ ಹೇಳಿದರು.
ನಗರದ ರೋಟರಿ ಸಭಾಭವನದಲ್ಲಿ ಶಂಕರ್ ನಾಗ್ ಅಭಿಮಾನಿಗಳ ಕಲಾವೇದಿಕೆ ಮತ್ತಿತರ ಸಂಘಸಂಸ್ಥೆಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವರನಟ ಡಾ.ರಾಜಕುಮಾರ್ ಅವರ 97ನೇ, ಪುನೀತ್ ರಾಜಕುಮಾರ್ ಅವರ 51ನೇ ಹುಟ್ಟುಹಬ್ಬ, ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ರಾಜ್ ಕುಮಾರ್ ರವರು ಕೌಟುಂಬಿಕ ಮತ್ತು ಮಾನವೀಯ ಚಿತ್ರಗಳ ಮೂಲಕ ಸಮಾಜಕ್ಕೆ ಮಾದರಿಯಾಗಿ ಉಳಿದುಕೊಂಡಿದ್ದಾರೆ, ನಾಡಿನ ಕವಿ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಅಗತ್ಯವಿದೆ, ವ್ಯವಹಾರಿಕ ಬದುಕಿನಲ್ಲಿ ಕಲೆ ಸಂಸ್ಕೃತಿ ಬೆಳೆಸುವ ಕಲಾವಿದರು ಸಾಧಕರಾಗಿ ಉಳಿಯುತ್ತಾರೆ ಎಂಬುದಾಗಿ ಹೇಳಿದರು.
ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಕವಿ ಹಾಗೂ ಪತ್ರಕರ್ತ ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಬರಹಗಾರನಾಗಿ, ಸಾಮಾಜಿಕ ಜವಾಬ್ದಾರಿ ಇರಬೇಕು, ವರ್ತಮಾನದ ತಲ್ಲಣಗಳಿಗೆ ಗಟ್ಟಿಧ್ವನಿಯಾಗಬೇಕು, ಸಾಮಾನ್ಯ ಜನರ ಬದುಕನ್ನು ಸಂಕಷ್ಟಕ್ಕೆ ದುಡುತ್ತಿರುವ ಬಿಕ್ಕಟ್ಟುಗಳ ಬಗ್ಗೆ ಕಳಕಳಿ ಇರಬೇಕು, ಪ್ರಜಾಪ್ರಭುತ್ವ ಅಧಿಕಾರವನ್ನು ಸ್ವಾರ್ಥಕ್ಕೆ ಬಳಕೆ ಮಾಡುವ ರಾಜಕಾರಣದ ವಿರುದ್ಧ ಬರಹ ಬಲಗೊಳ್ಳಬೇಕು
ಅಲ್ಲದೆ, ಸಮಾಜದಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ ಶಿಕ್ಷಣ ವ್ಯಾಪಾರೀಕರಣ ಕುರಿತು ಬೆಳಕು ಚೆಲ್ಲುವ ಸಾಹಿತ್ಯ ರಚನೆ ಆಗಬೇಕು, ಬಯಲುಸೀಮೆಯ ಜನ ಜೀವನ ಮತ್ತು ಇಲ್ಲಿನ ಸಂಕಷ್ಟದ ಪರಿಸ್ಥಿತಿಗಳನ್ನು ದಾಖಲು ಮಾಡುವ ಒಳಗಣ್ಣಿನ ಚೈತನ್ಯ ಕವಿಗಳಾಧವರಿಗೆ ಇರಬೇಕು ಎಂಬುದಾಗಿ ಹೇಳಿದರು.
ಕಲಾವೇದಿಕೆ ಸಂಸ್ಥಾಪಕ ಅಧ್ಯಕ್ಷ ಜೂನಿಯರ್ ಶಂಕರ್ ನಾಗ್ ಹೆಚ್.ಸಿ.ದಿವುಶಂಕರ್ ಮಾತನಾಡಿ, ಕಲಾಸಂಘಟಿತ ಕಾರ್ಯಕ್ರಮಗಳಿಗೆ ಸಾರ್ವಜನಿಕರ ಪ್ರೋತ್ಸಾಹ ಸಿಗಬೇಕು, ಸುಮಾರು ಮೂರು ದಶಕಗಳಿಂದ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಕಲಾ ವೇದಿಕೆಗೆ ನಿವೇಶನ ಮತ್ತು ಒಂದು ಕಟ್ಟಡ ಸೌಕರ್ಯ ಆಗಬೇಕು ಎಂಬುದಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶೈಲಜಾ ಬಾಬು, ನಿರ್ಮಲ ಭಾರದ್ವಾಜ್, ರಶ್ಮಿ, ಉಷಾರಾಣಿ, ಬಿಜಿಕೆರೆ ಶ್ರೀರಾಮುಲು, ಬಬ್ಬೂರು ತಿಪ್ಪೀರನಾಯಕ, ಇಂಗಳದಾಳ್ ತಿಮ್ಮಯ್ಯ, ಪಿಲ್ಲಹಳ್ಳಿ ಚಿತ್ರಲಿಂಗಪ್ಪ, ಕ್ಲಾಸಿಕ್ ಚಂದ್ರಶೇಖರ್, ಹೊನ್ನೂರಾಲಿ ಲೋಕೇಶ್, ಪಲ್ಲವಿ ಪಂಡರಹಳ್ಳಿ, ಶಿವರುದ್ರಪ್ಪ, ಸತೀಶ್ ಕುಮಾರ್, ಭಾಗ್ಯಮ್ಮ, ರಮೇಶ್ ಇತರರು ಕವಿಗೋಷ್ಠಿಯಲ್ಲಿ ಕವಿತೆಗಳನ್ನು ವಾಚನ ಮಾಡಿದರು.
ಈ ಕಾರ್ಯಕ್ರಮದಲ್ಲಿ ಪರಶುರಾಮ್, ಡಾ.ಮಂಜುನಾಥ್, ರೈತ ಮುಖಂಡ ಜಯಣ್ಣ, ಜೂನಿಯರ್ ರಾಜ್ ಕುಮಾರ್, ಈ.ಎಲ್ಲೇಶ್, ಎಂ.ಬಿ.ರಂಗಸ್ವಾಮಿ, ಲಿಂಗಪ್ಪ, ಹೆಚ್.ಸಿದ್ದೇಶ್, ಶ್ರೀನಿವಾಸ್, ವಿನೋದ್ ಕುಮಾರ್, ದಾನಪ್ಪ, ನಟರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
