
ಹಿರಿಯೂರು:
ಶಿಕ್ಷಣ,ಸಂಘಟನೆ, ಹೋರಾಟದ ಮೂಲಕ ನಮ್ಮ ಹಕ್ಕುಗಳನ್ನು ಪಡೆಯಬೇಕೆಂದು ಹೇಳಿದವರು ಬಾಬಾಸಾಹೇಬ್ ಅಂಬೇಡ್ಕರ್. ಅವರು ನಮ್ಮೆಲ್ಲರ ದೈವ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಮಾತ್ರ ಶೋಷಣೆಯಿಂದ ಮುಕ್ತಿ ಸಿಗಲಿದೆ ಎಂಬುದಾಗಿ ಸಂವಿಧಾನ ಸಂರಕ್ಷಣಾ ಸಮಿತಿ ಸಂಸ್ಥಾಪಕಅಧ್ಯಕ್ಷರಾದ ಕೆ. ರಾಮಚಂದ್ರಪ್ಪಅವರು ಹೇಳಿದರು.
ತಾಲ್ಲೂಕಿನ ಮಾರಕಣಿವೆ ಪ್ರವಾಸಿಮಂದಿರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69ನೇ ಪರಿನಿರ್ವಾಣದಅಂಗವಾಗಿ ಸಂವಿಧಾನ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ 2 ದಿನಗಳ ರಾಜ್ಯ ಮಟ್ಟದ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದರೂ ಶೋಷಿತರ ಬದುಕಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬದಲಾವಣೆ ಆಗಿಲ್ಲ.ಅಸ್ಪೃಶ್ಯ ಆಚರಣೆ, ದಲಿತ ಮಹಿಳೆಯರ ಮೇಲಿನ ದೌರ್ಜನ್ಯಗಳು ನಿಂತಿಲ್ಲ.ಇಂತಹ ಅನ್ಯಾಯಗಳ ವಿರುದ್ಧ ದಲಿತ ಸಂಘರ್ಷ ಸಮಿತಿ ಸ್ಥಾಪಕ ಕೃಷ್ಣಪ್ಪನವರ ರೀತಿಯ ಹೋರಾಟದ ಅಗತ್ಯವಿದೆ. ಎಂದರಲ್ಲದೆ,
ಸಂಘಟನೆಗಳು ಒಟ್ಟುಗೂಡಿ ಹೋರಾಟ ನಡೆಸಿದಲ್ಲಿ ಅದನ್ನು ಎದುರಿಸುವ ಶಕ್ತಿ ಯಾವ ಆಡಳಿತಕ್ಕೂ ಇರದು. ನಮ್ಮ ಹಕ್ಕುಗಳ ರಕ್ಷಣೆಗಾಗಿ, ಸಂವಿಧಾನದ ಉಳಿವಿಗಾಗಿ ನಮ್ಮ ಹೋರಾಟ ನಿರಂತರ ನಡೆಯಲಿದೆ ಎಂಬುದಾಗಿ ಅವರು ಹೇಳಿದರು.

ಅಂಬೇಡ್ಕರ್ ಅವರ ಬದುಕು ಹಾಗೂ ಚಿಂತನೆಗಳ ಬಗ್ಗೆ ವಕೀಲ ಎಸ್.ಪರಮೇಶ್, ಕಾನೂನು ನೆರವು ಕುರಿತು ಗಣೇಶ್ ಸಂಗೊಳ್ಳಿ ಅವರು ಉಪನ್ಯಾಸ ನೀಡಿದರು. ಅಂಬೇಡ್ಕರ್ ಅವರ ಅನುಯಾಯಿಗಳು, ಶಿಕ್ಷಣಪ್ರೇಮಿಗಳು, ವಿದ್ಯಾರ್ಥಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು.
ಈ ವಿಚಾರಗೋಷ್ಠಿಯಲ್ಲಿ ಸಮಿತಿಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಆರ್.ರಾಘವೇಂದ್ರ, ಕಾರ್ಯದರ್ಶಿ ಎನ್.ಸಂಜೀವಪ್ಪ, ಸಂಘಟನಾ ಕಾರ್ಯದರ್ಶಿ ಎನ್.ಮಾರುತಿ, ವಸಂತ್, ಜಗದೀಶ್ ಪೂಜಾರ್, ಹೊನ್ಮಪ್ಪಮಾಲಿಗಿ, ಶಿವರಾಜ್ ಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
