
ಹಿರಿಯೂರು:
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆ ಅರ್ಥಮಾಡಿಕೊಂಡರೆ ಸಮಾಜ ಅಭಿವೃದ‍್ಧಿ ಪಥದಲ್ಲಿ ಸಾಗುತ್ತದೆ ಎಂಬುದಾಗಿ ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರು ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ತಾಲ್ಲೂಕು ಆಡಳಿತ ಮಂಡಳಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ದಲಿತ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಾಜಮುಖಿ ಚಿಂತನೆಗಳು, ತತ್ವಾದರ್ಶ, ವಿಚಾರಧಾರೆಗಳ ಮೂಲಕ ವಿಶ್ವಮಾನವರೆನಿಸಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಆಶಯಗಳನ್ನು ಗಮನದಲ್ಲಿರಿಸಿಕೊಂಡು ವಿಶ್ವ ಶ್ರೇಷ್ಠ ಸಂವಿಧಾನ ರಚಿಸಿದ ಮಹಾನ್ ಚೇತನ ಎಂಬುದಾಗಿ ಅವರು ಹೇಳಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಶ್ರೀಮತಿ ಡಾ.ಜೆ.ಆರ್.ಸುಜಾತ ಅವರು ಮಾತನಾಡಿ ಸಂವಿಧಾನ ಪ್ರಜಾಪ್ರಭುತ್ವದ ಹಿರಿಮೆಯಾಗಿದೆ.ಅದರ ಆಶಯಗಳನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂಬುದಾಗಿ ಅವರು ಹೇಳಿದರು.

ದಲಿತ ಮುಖಂಡರಾದ ಕಲ್ಲಹಟ್ಟಿಹರೀಶ್ ಅವರು ಮಾತನಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೆಮ್ಮದಿಯ ಬದುಕು ಕಟ್ಟಿಕೊಳ್ಳುವ ನಮ್ಮ ಸಂವಿಧಾನ ಅವಕಾಶ ಕಲ್ಪಸಿದೆ. ಸಂವಿಧಾನದ ಪೀಠಿಕೆಯಲ್ಲಿ ದೇಶದ ಪ್ರಜಾಪ್ರಭುತ್ವದ ಹಿರಿಮೆ, ಶಕ್ತಿ, ಶ್ರೇಷ್ಠ ಗುಣಗಳು ಅಡಗಿವೆ. ಜಗತ್ತಿನಲ್ಲೇ ವಿಶಿಷ್ಟ ಸಂವಿಧಾನವನ್ನು ಕೊಡುಗೆ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನಾವು ಸದಾ ಸ್ಮರಿಸಬೇಕು ಎಂಬುದಾಗಿ ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎಂ.ಸಿದ್ಧೇಶ್, ಪೌರಾಯುಕ್ತರಾದ ಎ.ವಾಸೀಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್, ನಗರಸಭೆ ಮಾಜಿ ಸದಸ್ಯರಾದ ಮಮತಾ, ಮಂಜುಳಾ, ಮುಖಂಡರಾದ ಜೀವೇಶ್, ಜಿ.ಎಲ್.ಮೂರ್ತಿ, ಜ್ಞಾನೇಶ್, ಪ್ರದೀಪ್, ಓಂಕಾರಪ್ಪ, ತಿಪ್ಪಮ್ಮ, ಟಿ.ಚಂದ್ರಶೇಖರ್, ಸಮಾಜಕಲ್ಯಾಣಾಧಿಕಾರಿ ದಿನೇಶ್, ಕೆ.ಪಿ.ಸಿ.ಸಿ.ಸದಸ್ಯರಾದ ಸುರೇಶ್ ಬಾಬು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
