
ಹಿರಿಯೂರು :
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೊಳಿಸುವ ವಿಷಯದಲ್ಲಿ ಪ್ರಸ್ತುತ ಆಡಳಿತರೂಢ ಕಾಂಗ್ರೆಸ್ ಸರ್ಕಾರ ಅನುಸರಿಸುತ್ತಿರುವ ವಿಳಂಬ ನೀತಿ, ಉದಾಸೀನತೆ ಹಾಗೂ ಮಾದಿಗ ಸಮುದಾಯಗಳನ್ನು ದಿಕ್ಕು ತಪ್ಪಿಸುವ ರಾಜಕೀಯ ತಂತ್ರಗಾರಿಕೆಯನ್ನು ಜನರೆದುರು ಮುಂದಿನ ದಿನಗಳಲ್ಲಿ ಬಯಲು ಮಾಡಲಾಗುವುದು ಎಂಬುದಾಗಿ ಹಿರಿಯ ಒಳಮೀಸಲಾತಿ ಹೋರಾಟಗಾರರು ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಪಿ.ಪ್ರಕಾಶ್ ಮೂರ್ತಿ ಆಗ್ರಹಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರದಂದು ಒಳಮೀಸಲಾತಿ ಹೋರಾಟದ ಮುಂದಿನ ನಡೆಯ ಕುರಿತು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪರಿಶಿಷ್ಟ ಜಾತಿಯಲ್ಲಿನ 101ಜಾತಿಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆಯಾಗಬೇಕು ಎಂಬ ಹಿನ್ನಲೆಯಲ್ಲಿ ಕಳೆದ ಮೂರು ದಶಕಗಳಿಂದಲೂ ಹೋರಾಟ ಮಾಡಿಕೊಂಡು ಬಂದ ಹಿನ್ನೆಲೆಯಲ್ಲಿ ಅದರ ಸಂಪೂರ್ಣ ಹೋರಾಟದಲ್ಲಿ ಭಾಗಿಯಾಗಿದ್ದ ಮಾದಿಗ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರ ಬಗೆದ ದ್ರೋಹವನ್ನು ಮಾತ್ರ ಯಾವುದೇ ಕಾರಣಕ್ಕೂ ಮರೆಯಲು ಸಾಧ್ಯವಿಲ್ಲ ಎಂಬುದಾಗಿ ಅವರು ಹೇಳಿದರು.
ಚಿತ್ರದುರ್ಗ ಒಳಮೀಸಲಾತಿ ಹೋರಾಟಗಾರ ಸಮಿತಿಯ ಆಧ್ಯಕ್ಷರಾದ ಹುಲ್ಲೂರು ಕುಮಾರಸ್ವಾಮಿರವರು ಮಾತನಾಡಿ, ಪರಿಶಿಷ್ಟ ಜಾತಿಯಲ್ಲಿರುವ ಎಡಗೈ, ಬಲಗೈ, ಹಾಗೂ ಅಲೆಮಾರಿ ಮತ್ತು ಸ್ಪೃಶ್ಯ ಸಮುದಾಯಗಳ ನಡುವೆ ಪರಸ್ಪರ ದ್ವೇಷ ಮತ್ತು ಅಪನಂಬಿಕೆಯನ್ನು ಬಿತ್ತಿ, ಅ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ
ರಾಜ್ಯದ ವಿವಿಧ ಇಲಾಖೆಗಳಲ್ಲಿರುವ ಸುಮಾರು 56, 000ಕ್ಕೂ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಇಂದಿಗೂ ನೆನಗುದಿಗೆ ಬಿದ್ದಿದ್ದು, ಸರ್ಕಾರದ ಈ ನಾಟಕೀಯ ಧೋರಣೆಯಿಂದ ಪರಿಶಿಷ್ಠಜಾತಿಯ ಬಡ ಹಾಗೂ ಪ್ರತಿಭಾವಂತ ಯುವಕ/ಯುವತಿಯರು ಸರ್ಕಾರಿ ಉದ್ಯೋಗಾವಕಾಶಗಳಿಂದ ವಂಚಿತರಾಗುತ್ತಿದ್ದಾರೆ.
ನಾಟಕ ಮತ್ತು ತಜ್ಞರ ವರದಿಗಳನ್ನು ಆಧರಿಸಿ ವೈಜ್ಞಾನಿಕವಾಗಿ ತಕ್ಷಣವೇ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೆ.ಎಚ್.ಮುನಿಯಪ್ಪಯವರು ಎಲ್ಲಾ ರಂಗಗಳಲ್ಲೂ ಒಳಮೀಸಲಾತಿ ಜಾರಿ ಮಾಡಬೇಕು ಎಂಬುದಾಗಿ ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಒಳಮೀಸಲಾತಿ ಹೋರಾಟಗಾರ ಹಾಗೂ ದಲಿತಮುಖಂಡರಾದ ಕೆ.ಪಿ.ಶ್ರೀನಿವಾಸ್,ಹನುಮಂತರಾಯ ಬ್ಯಾಡರಹಳ್ಳಿ, ಶಿವುಖಂಡೇನಹಳ್ಳಿ, ಮಹಾಲಿಂಗಪ್ಪ ಉಪ್ಪಳಗೆರೆ, ರಾಘು ಈಶ್ವರಗೆರೆ, ಓಂಕಾರ್ ಮಸ್ಕಲ್ ಮಟ್ಟಿ, ಮಾರುತೇಶ್ ಕುನಿಕೆರೆ, ಕದುರಪ್ಪ ಶಿಡ್ಲಯನಕೋಟೆ, ಸೇರಿದಂತೆ ಅನೇಕ ಮುಖಂಡರುಗಳು ಉಪಸ್ಥಿತರಿದ್ದರು.
